ಸುದ್ದಿ ಕನ್ನಡ ವಾರ್ತೆ
ಜೊಯಿಡಾ :ರಾಜ್ಯ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯವರು 13.8.26 ರಂದು ಗ್ರಾಮ ಪಂಚಾಯತಿಗಳಿಗೆ ನೀಡಿರುವ ಮಾರ್ಗ ಸೂಚಿಯನ್ನು ನಾಗೋಡ ಗ್ರಾಮ ಪಂಚಾಯತದಲ್ಲಿ ಸಾರ್ವಜನಿಕರು ತೀವ್ರವಾಗಿ ವಿರೋಧಿಸಿದರು.
ಈ ಮಾರ್ಗಸೂಚಿಯಂತೆ ಅರಣ್ಯ , ಬೆಟ್ಟ ಸರ್ಕಾರಿ ಜಾಗಗಳಲ್ಲಿ ಗಾರಿವಠಾಣದಲ್ಲಿ ಕಟ್ಟಿರುವ ಕಟ್ಟಡಗಳಿಗೆ ಈ ಹಿಂದೆ ಸ್ವೀಕರಿಸಲಾಗುತ್ತಿದ್ದ ಆಸ್ತಿಕರ , ತೆರಿಗೆಗಳನ್ನು ಮುಂದುವರೆಸದಂತೆ ಸೂಚಿಸಲಾಗಿದೆ. ಅಂತಹ ಆಸ್ತಿಗಳ ಪಟ್ಟಿ ಮಾಡಿ ತೆರಿಗೆ ನಿರ್ಧಾರದಿಂದ ಕೈ ಬಿಡಲು ಸೂಚಿಸಿದ್ದು ಇದು ಜನತೆಗೆ ಮಾಡುವ ಮಹಾ ದ್ರೋಹ ಎಂದು ಸಾರ್ವಜನಿಕರು ಪ್ರತಿಭಟಿಸಿದರು. ಇದರಿಂದ ಪ್ರತಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನೂರಾರು ಕುಟುಂಬಗಳು ಅನಾಥವಾಗುತ್ತವೆ.
ವಸತಿ ಹಕ್ಕು , ಆಸ್ತಿ ಹಕ್ಕು ಸ್ಥಳೀಯ ದಾಖಲೆಗಳು ನಾಶವಾಗುತ್ತವೆ ಎಂದು ತಿಳಿದ ಜನರು ಸರಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗುವ ಭಯದಿಂದ ಸರಕಾರದ ಈ ನಿರ್ಧಾರದ ವಿರುದ್ಧ ಸಿಡಿದೆದ್ದರು ನಾಗೋಡ ಗ್ರಾಮ ಪಂಚಾಯತಕ್ಕೆ ಬಂದು ಪ್ರತಿಭಟಿಸಿದರು. ಜೊತೆಯಲ್ಲಿ ಸರಕಾರದ ಈ ಆದೇಶವನ್ನು ತಕ್ಷಣವೇ ಹಿಂದೆ ಪಡೆಯಲು ಸರಕಾರಕ್ಕೆ ಸೂಚಿಸಬೇಕೆಂದು ಮಾನ್ಯ ರಾಜ್ಯಪಾಲರಿಗೆ ಮನವಿ ನೀಡಿ ಆಗ್ರಹಿಸಿದ್ದಾರೆ.
ಸುಭಾಸ್ ಮಾಂಜ್ರೇಕರ್ ನೇತೃತ್ವದಲ್ಲಿ ಹಿರಿಯರಾದ ತುಕಾರಾಂ ಮಾಂಜ್ರೇಕರ್ , ದಿಗಂಬರ ದೇಸಾಯಿ, ಸಮೀರ್ ತವಡಕರ್ ಸೇರಿದಂತೆ ನೂರಾರು ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಮನವಿ ನೀಡಿದರು.
