ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ರಾಮನಗರ-ಸದಾಶಿವಗಡ ರಾಜ್ಯ ಹೆದ್ದಾರಿಯ ಗಣೇಶಗುಡಿ-ಇಳವಾ ಬಳಿ ಮಧ್ಯ ರಾತ್ರಿಯ ವೇಳೆ ಭೂಕುಸಿತ ಸಂಭವಿಸಿ ಕೆಲವು ಸಮಯ ಸಂಚಾರ ಅಸ್ತವ್ಯಸ್ತಗೊಂಡಿತು.

​ಭೂಕುಸಿತದೊಂದಿಗೆ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು. ರಸ್ತೆಯ ಮೇಲೆ ಮಣ್ಣು ಹಾಗೂ ಮರ ಬಿದ್ದಿದ್ದರಿಂದ ವಾಹನ ಸವಾರರು ಕೆಲವು ಕಾಲ ತೊಂದರೆ ಅನುಭವಿಸುವಂತಾಯಿತು.ಸ್ಥಳೀಯ ಮಾಹಿತಿಯ ಪ್ರಕಾರ, ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ರಿಸಾರ್ಟ್‌ಗಳಿಗೆ ಬೆಟ್ಟದ ಮೇಲಿನಿಂದ ಪೈಪ್‌ಲೈನ್ ಮೂಲಕ ನೀರು ಸಾಗಿಸಲಾಗುತ್ತಿತ್ತು. ಈ ಪೈಪ್‌ಲೈನ್‌ನಲ್ಲಿ ಸೋರಿಕೆ ಉಂಟಾಗಿರುವುದು ಹಾಗೂ ಬೆಟ್ಟದ ಮಣ್ಣು ಸಡಿಲಗೊಂಡಿರುವುದು ಭೂಕುಸಿತಕ್ಕೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

​ಘಟನೆಯ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಂಚಾರ ಸುಗಮಗೊಳಿಸಲು ಮಣ್ಣು ಹಾಗೂ ಮರ ತೆರವು ಕಾರ್ಯ ಕೈಗೊಳ್ಳಲಾಗಿದೆ. ಮಳೆ ಮುಂದುವರಿದರೆ ಇದೇ ಭಾಗದಲ್ಲಿ ಮತ್ತಷ್ಟು ಮಣ್ಣು ಕುಸಿಯುವ ಸಾಧ್ಯತೆಯಿರುವುದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.