ಸುದ್ದಿ ಕನ್ನಡ ವಾರ್ತೆ
ಶಿರಸಿ:ಹೆಣ್ಣಿನ ಮಾಂಗಲ್ಯದಲ್ಲಿ ಅರಿಶಿಣ ಕುಂಕುಮದಲ್ಲಿ ಗಂಡನ ಜೀವವನ್ನು ಉಳಿಸುವ ಶಕ್ತಿ ಇದೆ. ಯಾರೇ ಅರಿಶಿಣ ಕುಂಕುಮ ನೀಡಿದರೂ ಬೇಡ ಎನ್ನದೆ ಸ್ವೀಕರಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಹೆಗಡೆ ಹೇಳಿದರು.
ಶುಕ್ರವಾರ ತಾಲೂಕಿನ ದೊಡ್ನಳ್ಳಿಯಲ್ಲಿ ಅನಂತಮೂರ್ತಿ ಹೆಗಡೆ ಹಾಗೂ ತಂಡದಿಂದ ಆಯೋಜಿಸಿದ್ದ ಶ್ರಾವಣ ಮಾಸದ ಕೊನೆಯ ಶುಕ್ರವಾರವಾದ ಅರಿಶಿಣ ಕುಂಕುಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,
ಅರಿಶಿಣ ಕುಂಕುಮಕ್ಕೆ ತನ್ನದೇ ಆದ ಶಕ್ತಿ ಇದೆ. ತನ್ನದೇ ಆದ ವೈಶಿಷ್ಟ್ಯತೆ ಇದೆ.ಯಾವ ಮನೆಯಲ್ಲಿ ಹೆಣ್ಣು ಮಗು ಸಂತಸದಿಂದ ಇದ್ದರೆ ಆ ಮನೆ ಸಮೃದ್ಧವಾಗಿರುತ್ತದೆ. ಸಮಾಜದಲ್ಲಿ ಸಾಮರಸ್ಯ ಇರಬೇಕು.
ನಾವೆಲ್ಲ ಒಂದು, ನಾವೆಲ್ಲ ಬಂಧು, ನಾವೆಲ್ಲ ಹಿಂದೂ. ಮನೆಯಿಂದ ಹೊರಗೆ ಬಂದಮೇಲೆ ನಾವೆಲ್ಲರೂ ಬಂಧುಗಳಂತೆ ಇರಬೇಕು. ಜಾತಿ ಭೇದಭಾವ ಇರಬಾರದು. ಹಿಂದೂ ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ನೋಡಿದಾಗ ಬೇಸರವಾಗುತ್ತದೆ. ನಾವೆಲ್ಲರೂ ಕೂಡಾ ಅನ್ಯೋನ್ಯತೆಯಿಂದ ಇರಬೇಕು. ಒಂದು ಕುಟುಂಬ ಸುಂದರವಾಗಿರಬೇಕು ಎಂದರೆ ಆ ಮನೆಯ ಮಹಿಳೆ ಸಧೃಡವಾಗಿರಬೇಕು.
ಹೆಣ್ಣನ್ನು ನಾವು ಪೂಜನೀಯ ಭಾವನೆಯಿಂದ ನೋಡುತ್ತೇವೆ .ನೆಲ ,ಜಲಕ್ಕೆ ಹೋಲಿಸಲಾಗಿದೆ . ಹೆಣ್ಣನ್ನು ಎಲ್ಲರೂ ಗೌರವದಿಂದ ಕಾಣಬೇಕು ಎಂದರು.
ದೊಡ್ನಳ್ಳಿ ಪಂಚಾಯಿತಿ ಪಿಡಿಓ ಪ್ರೀತಿ ಶೆಟ್ಟಿ ಮಾತನಾಡಿ,
ಒಂದು ಮಹಿಳೆಗೆ ಅರಿಶಿನ ಕುಂಕುಮ ನೀಡುವುದು ಎಂದರೆ ಅದು ಅತೀದೊಡ್ಡ ಗೌರವ ನೀಡಿದಂತೆ. ಅರಿಶಿಣ ಕುಂಕುಮ ಇಟ್ಟುಕೊಳ್ಳುವುದರಿಂದ ಆರೋಗ್ಯಕ್ಕೆ ತುಂಬಾ ಲಾಭವಿದೆ. ಶ್ರೀಲಕ್ಷ್ಮಿ ಹಸಿರು ಫಲವತ್ತತೆಯನ್ನು ನೀಡುತ್ತಾಳೆ.ಹಾಗಾಗಿ ಮಹಿಳೆಯರಿಗೆ ಹಸಿರು ಬಳೆಗಳನ್ನು ನೀಡುತ್ತಾರೆ ಎಂದರು. ಬಿಜೆಪಿ ಮುಖಂಡ ಶ್ರೀಪಾದ ಹೆಗಡೆ ಮಾತನಾಡಿ ,ಹಿಂದೂ ಧರ್ಮದಲ್ಲಿ ಅರಿಶಿನ ಕುಂಕುಮಕ್ಕೆ ವಿಶೇಷ ಸ್ಥಾನಮಾನವಿದೆ. ನಮ್ಮ ದೇಶದಲ್ಲಿ ಬೆಳೆಯುವ ಅರಿಶಿಣಕ್ಕೆ ವಿದೇಶದಲ್ಲೂ ಉತ್ತಮ ಬೇಡಿಕೆ ಇದೆ. ದಿನನಿತ್ಯ ಅರಿಶಿನ ಕುಂಕುಮ ಬಳಸುವುದರಿಂದ ಆರೋಗ್ಯಕ್ಕೆ ಹಿತಕರ ಎಂದರು.
ನರೇಬೈಲ್ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್ ಎನ್ ಹೆಗಡೆ ಮಾತನಾಡಿ,
ಶ್ರಾವಣ ಮಾಸ ಮಹಿಳೆಯರ ಹಬ್ಬ. ಅರಿಶಿಣ ಕುಂಕುಮ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆದಿದೆ.
ಅನಂತಮೂರ್ತಿ ಹೆಗಡೆ ಅವರು ಈಗಾಗಲೇ ಸಾಕಷ್ಟು ಜನಪರ ಕೆಲಸವನ್ನು ಮಾಡಿದ್ದಾರೆ. ಅನಂತಮೂರ್ತಿ ಹೆಗಡೆ ಅವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಲಸಮಾಡುವ ಶಕ್ತಿಯನ್ನು ದೇವರು ನೀಡಲಿ ಎಂದರು.
ಈ ಸಮಯದಲ್ಲಿ ನೂರಾರು ತಾಯಂದಿರಿಗೆ ಅರಿಶಿನ ಕುಂಕುಮ ಭಾಗಿನ ನೀಡಿ ಸತ್ಕರಿಸಲಾಯಿತು .
ಈ ಸಂದರ್ಭದಲ್ಲಿ ಶಂಭು ಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಪರಮೇಶ್ವರ ಭಟ್ ಪ್ರಮುಖರಾದ, ಸುಬ್ರಾಯ ಹೆಗಡೆ, ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಮೀನಾಕ್ಷಿ, ರಾಮಣ್ಣ ಜೋಗಿ , ವಿನಾಯಕ ಭಟ್, ಕೀರಣ ಕಾನಡೆ , ವಿರೇಂದ್ರ ಗೌಡ , ಶಿವಪ್ಪ ನಾಯ್ಕ ನರೇಬೈಲ್ , ಸಂತೋಷ ನಾಯ್ಕ್ ಬ್ಯಾಗದ್ದೆ , ಸಚಿನ್ ಭಟ್ ಸೇರಿದಂತೆ ಹಲವರು ಇದ್ದರು.
ಲಕ್ಷ್ಮೀ ಕಾನಡೆ ನಿರೂಪಿಸಿದರು.
