ಸುದ್ದಿ ಕನ್ನಡ ವಾರ್ತೆ
ಗ್ಯಾಂವಟಾಣ, ರೆವೆನ್ಯೂ ಪಡ, ಅರಣ್ಯ, ಬೆಟ್ಟ ಮುಂತಾದ ಸ್ಥಳಗಳಲ್ಲಿನ ಆಸ್ತಿಗಳನ್ನು ತೆರಿಗೆ ಪಟ್ಟಿಯಿಂದ ಕೈ ಬಿಡುವ ಆದೇಶ ಏನಾಯಿತು ಎಂದು ಬಿ ಜೆ ಪಿ ವಕ್ತಾರ ನಿಡಗೋಡು ಸದಾನಂದ ಭಟ್ ಕೇಳಿದ್ದಾರೆ. ಈ ಆದೇಶವನ್ನು ತಕ್ಷಣ ಹಿಂಪಡೆಯಲು ರಾಜ್ಯ ಪಂಚಾಯತ್ ರಾಜ್ ಸಚಿವರಿಗೆ ಇರುವ ತೊಂದರೆಯಾದರು ಏನು? ಪಂಚಾಯತ್ ರಾಜ್ ಇಲಾಖೆಯಿಂದ 13.8.2026ರಂದು ರಾಜ್ಯದ್ಯಂತ ಇರುವ ಅತಿಕ್ರಮಣದಲ್ಲಿನ ಆಸ್ತಿಗಳ ತೆರಿಗೆ ರದ್ದು ಮಾಡಿ ತೆರಿಗೆ ಪಟ್ಟಿಯಿಂದ ಅವುಗಳನ್ನು ಕೈ ಬಿಡಲು ಆದೇಶಿಸಿರುವ ಜನವಿರೋಧಿ ಸುತ್ತೊಲೆ ವಾಪಸ್ ಪಡೆಯುವಂತೆ ಭಾರತೀಯ ಜನತಾ ಪಾರ್ಟಿ ಅಗ್ರಹಿಸಿತ್ತು . ಶಿರಸಿ ಶಾಸಕರಾದ ಭೀಮಣ್ಣ ನಾಯಕ್ ಮತ್ತು ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಅವರು ಸಚಿವರಾದ ಈಶ್ವರ ಕಂಡ್ರೆ ಅವರನ್ನು ಭೇಟಿಯಾಗಿ ಈ ಕುರಿತು ಸುತ್ತೋಲೆ ವಾಪಸ್ ಪಡೆಯಲು ಆಗ್ರಹಿಸಿದ್ದಾರೆ ಎಂದಾಗ ಸಚಿವರು ಈ ಕುರಿತು ಅಧಿವೇಶನದ ಸಂದರ್ಭದಲ್ಲಿ ಎಲ್ಲಾ ಶಾಸಕರುಗಳ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎನ್ನುವುದನ್ನು ನೋಡಿದರೆ ಈ ಆದೇಶ ಹೊರಡಿಸಿರುವದರ ಹಿಂದೆ ರಾಜ್ಯ ಕಾಂಗ್ರೆಸ್ ಸರಕಾರ ಅತಿಕ್ರಮಣ ದಾರರನ್ನು ಒಕ್ಕಲಿಬ್ಬಿಸಲು ಯೋಜಿತವಾದ ಕಾರ್ಯಪಟ್ಟಿ ಸಿದ್ಧ ಪಡುತ್ತಿರುವಂತೆ ತೋರುತ್ತಿದೆ. ಆದೇಶ ಹೊರಡಿಸುವಾಗ ಯಾವ ಚರ್ಚೆ ಇಲ್ಲದೆ, ಶಾಸಕರುಗಳನ್ನು ಕೇಳದೆ ಹೊರಡಿಸಿರುವ ಜನವಿರೋಧಿ ಅವೈಜ್ಞಾನಿಕ ಆದೇಶವನ್ನು ಹಿಂಪಡೆಯಲು ಅಧಿವೇಶನದ ಸಂದರ್ಭದಲ್ಲಿ ಚರ್ಚಿಸುತ್ತೇನೆ ಎಂದಿರುವ ಸಚಿವರ ಹೇಳಿಕೆ ಖಂಡನೀಯ. ತಕ್ಷಣದಲ್ಲಿ ಈ ಆದೇಶವನ್ನು ಹಿಂಪಡೆಯಲು ಕಾಂಗ್ರೆಸ್ ಸರಕಾರದ ಮೀನಾ ಮೇಷ ಯಾಕೆ?
ಜಿಲ್ಲೆಯ ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಆದೇಶವನ್ನು ಹಿಂಪಡೆಯಲು ಆಗ್ರಹಿಸುತ್ತೇವೆ ಎಂದು ಹೇಳಿಕೆ ಕೊಟ್ಟು ಈಗ ಕೇವಲ ಸಚಿವರ ಜೊತೆಯಲ್ಲಿ ಮಾತನಾಡಿ ಈ ಕುರಿತು ತಕ್ಷಣ ನಿರ್ಧಾರಕ್ಕೆ ಬರಲಾಗದಿರುವುದನ್ನು ನೋಡಿದರೆ ಕಾಂಗ್ರೆಸ ಕೇವಲ ಜನರ ಕಣ್ಣಿಗೆ ಮಣ್ಣರೆಚುವಂತಿದೆ. ಕಾಂಗ್ರೆಸ್ ಶಾಸಕರುಗಳಿಗೆ ಬಡ ಜನತೆಯ ಪರವಾಗಿ ನಿಜವಾದ ಕಳಕಳಿ ಇದ್ದಲ್ಲಿ ತಕ್ಷಣ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಆದೇಶವನ್ನು ಹಿಂಪಡೆಯಲು ಕ್ರಮವಹಿಸಲಿ. ಇಲ್ಲದಿದ್ದಲ್ಲಿ ಅತಿಕ್ರಮಣದಾರರ ಹಿತ ರಕ್ಷಣೆಗಾಗಿ ಉತ್ತರ ಕನ್ನಡ ಜಿಲ್ಲಾ ಭಾರತೀಯ ಜನತಾ ಪಾರ್ಟಿ ಈ ಆದೇಶವನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತದಲ್ಲಿ ನಮ್ಮ ಮನೆ ನಮ್ಮ ಹಕ್ಕು ಆಂದೋಲನ ನಡೆಸಿ ಸರಕಾರದ ಮೇಲೆ ಒತ್ತಡ ತರಲು ಸನ್ನದ್ದವಾಗಿದೆ.
ಜೀವನೋಪಾಯಕ್ಕಾಗಿ ಅತಿಕ್ರಮಣ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸ್ತವ್ಯ ಮಾಡಿ ಬಂದಿರುವ ಜನರ ಬದುಕನ್ನು ಬೀದಿಗೆ ತಳ್ಳಲು ಸಿದ್ಧವಾಗಿರುವ ರಾಜ್ಯ ಕಾಂಗ್ರೆಸ್ ಸರಕಾರದ ನೀತಿ ಖಂಡನೀಯಎಂದು ಸದಾನಂದ ಭಟ್ ನಿಡುಗೋಡ್ ಬಿಜೆಪಿ ಜಿಲ್ಲಾ ವಕ್ತಾರರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
