ಸುದ್ದಿ ಕನ್ನಡ ವಾರ್ತೆ
ಜೋಯಿಡಾ ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಡಿಜೆ ವ್ಯವಸ್ಥೆಗಳು ಮತ್ತು ಹೆಚ್ಚಿನ ಡೆಸಿಬೆಲ್ ಶಬ್ದ ವೃದ್ಧಿ ಸಾಧನಗಳ ಬಳಕೆಯನ್ನು ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹಬ್ಬಗಳು ಮೆರವಣಿಗೆಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ವೇಳೆ ಹೆಚ್ಚಿನ ಡೆಸಿಬೆಲ್ ಡಿಜಿ ವ್ಯವಸ್ಥೆಗಳು, ಲೌಡ್ ಸ್ಪೀಕರ್ಗಳು ಹಾಗೂ ಶಬ್ದ ವೃದ್ಧಿ ಸಾಧನಗಳ ಅತಿಯಾದ ಬಳಕೆಯಿಂದ ಸಾರ್ವಜನಿಕ ಶಾಂತಿ, ಆರೋಗ್ಯ ಹಾಗೂ ಕಾನೂನು-ಸುವ್ಯವಸ್ಥೆಗೆ ಧಕ್ಕೆಯಾಗುತ್ತಿರುವುದಾಗಿ ಉಲ್ಲೇಖ (1) ರಂತೆ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ ಕಾರವಾರ ರವರು ವರದಿ ಸಲ್ಲಿಸಿರುತ್ತಾರೆ. ಅಲ್ಲದೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಶಬ್ದ ಮಾಲಿನ್ಯ ನಿಯಮಗಳಡಿ ಡಿಜೆ ವ್ಯವಸ್ಥೆಗಳು ಮತ್ತು ಹೆಚ್ಚಿನ ಡೆಸಿಬೆಲ್ ಶಬ್ದ ವೃದ್ಧಿ ಸಾಧನಗಳ ನಿಯಂತ್ರಣ / ನಿಷೇಧ ಆದೇಶ ಹೊರಡಿಸಬೇಕೆಂದು ಸಹ ಕೋರಿರುತ್ತಾರೆ.
ಪ್ರಯುಕ್ತ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕ ಆರೋಗ್ಯ ಸಾರ್ವಜನಿಕ ಶಾಂತಿ, ಸಾರ್ವಜನಿಕ ಮಾನಸಿಕ ಆರೋಗ್ಯ ಸಾರ್ವಜನಿಕರ ಪ್ರಾಣ ಹಾಗೂ ಜೀವಭದ್ರತೆ ಕಾಪಾಡುವ ನಿಟ್ಟಿನಲ್ಲಿ ಶಬ್ದ ಮಾಲಿನ್ಯ (ನಿಯಂತ್ರಣ ಮತ್ತು ನಿಯಮ) ನಿಯಮಗಳು, 2000 ರನ್ವಯ ಹಾಗೂ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ, 2023 (BNSS) ಕಲಂ 163 ರಡಿ ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಡಿಜೆ ವ್ಯವಸ್ಥೆಗಳು ಮತ್ತು ಹೆಚ್ಚಿನ ಡೆಸಿಬೆಲ್ ಶಬ್ದ ವೃದ್ಧಿ ಸಾಧನಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸುವುದು ಹಾಗೂ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಪೊಲೀಸ್ ಇಲಾಖೆಯಿಂದ ಪೂರ್ವ ಲಿಖಿತ ಷರತ್ತುಬದ್ಧ ಮಿತ ಶಬ್ದ ವ್ಯವಸ್ಥೆಗಳಿಗೆ ಮಾತ್ರ ಅನುಮತಿ ನೀಡುವುದು ಸೂಕ್ತ ಎಂದು ಮನಗಂಡು ಈ ಕೆಳಗಿನಂತೆ ಆದೇಶಿಸಲಾಗಿದೆ.
ಆದೇಶ
ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳನ್ನಯ, ಕೆ. ಲಕ್ಷ್ಮೀಪ್ರಿಯಾ, ಭಾ.ಆ.ಸೇ ಜಿಲ್ಲಾ ದಂಡಾಧಿಕಾರಿ ಉತ್ತರ ಕನ್ನಡ ಜಿಲ್ಲೆ, ಆದ ನಾನು ಶಬ್ದ ಮಾಲಿನ್ಯ (ನಿಯಂತ್ರಣ ಮತ್ತು ನಿಯಮ) ನಿಯಮಗಳು, 2000 ರನ್ವಯ ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿ.ಎನ್.ಎಸ್.ಎಸ್), 2023 ಕಲಂ 163 ರಡಿ ನನಗೆ ಪ್ರದತ್ತವಾದ ಅಧಿಕಾರದ ಮೇರೆಗೆ ಸಾರ್ವಜನಿಕ ಸುವ್ಯವಸ್ಥೆಯ ಹಿತದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಯಾವುದೇ ಡಿಜಿ ವ್ಯವಸ್ಥೆಗಳು, ಬೇಸ್ ಬೂಸ್ಟರ್ಗಳು ಮೊಬೈಲ್ ಡಿಜೆ ವಾಹನಗಳು ಹಾಗೂ 75 ಡೆಸಿಬೆಲ್ ಮೀರಿದ ಶಬ್ದ ವೃದ್ಧಿ ಸಾಧನಗಳ ಬಳಕೆಯನ್ನು ಮುಂದಿನ ಆದೇಶದವರೆಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಇದಲ್ಲದೆ ವಸತಿ ಪ್ರದೇಶಗಳು, ಸೈಲೆಂಟ್ ಝೂನ್ ಗಳು (ಆಸ್ಪತ್ರೆ, ಶಾಲೆ, ನ್ಯಾಯಾಲಯ ಹಾಗೂ ಧಾರ್ಮಿಕ ಸ್ಥಳಗಳಿಂದ 100 ಮೀಟರ್ ವ್ಯಾಪ್ತಿಯೊಳಗಿನ ಪ್ರದೇಶಗಳು), ಇಳಿವು ರಸ್ತೆ/ಸಂಚಾರ ದಟ್ಟಣೆ ಪ್ರದೇಶಗಳು, ಸಮುದಾಯ ಸೂಕ್ಷ್ಮ ಪ್ರದೇಶಗಳು ಹಾಗೂ ಇಡೀ
ಜಿಲ್ಲೆಯಾದ್ಯಂತ ರಾತ್ರಿ 10:00 ಗಂಟೆಯಿಂದ ಬೆಳಗ್ಗೆ 6:00 ಗಂಟೆಯವರೆಗೆ ಡಿಜೆ ಅಥವಾ ಹೆಚ್ಚಿನ ಶಬ್ದ ಸಾಧನಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಯಾವುದೇ ಸಾರ್ವಜನಿಕ ಕಾರ್ಯಕ್ರಮ, ಮೆರವಣಿಗೆ ಅಥವಾ ಆಚರಣೆಯನ್ನು ಆಯೋಜಿಸುವವರು ಅತೀ ಅವಶ್ಯವಿದ್ದಲ್ಲಿ ಪೂರ್ವ ಲಿಖಿತ ಷರತ್ತುಬದ್ಧ ಮಿತ ಶಬ್ದ ವ್ಯವಸ್ಥೆಗಳಿಗೆ ಮಾತ್ರ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು ಶಬ್ದ ನಿಯಮಗಳ ಪಾಲನೆಗೆ ಸಂಬಂಧಿಸಿದಂತೆ ಲಿಖಿತ ಮುಚ್ಚಳಿಕೆ ಪತ್ರ ನೀಡಬೇಕು ಹಾಗೂ ಈ ಆದೇಶದ ಉಲ್ಲಂಘನೆ ಸಂಭವಿಸಿದ್ದಲ್ಲಿ ಆಯೋಜಕರು ವೈಯಕ್ತಿಕವಾಗಿ ಹೊಣೆಗಾರರಾಗಿರುತ್ತಾರೆ.
ಈ ಆದೇಶವನ್ನು ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ ಕಾರವಾರ ರವರು ತಕ್ಷಣದಿಂದ ಜಾರಿಗೆ ತರಲು ಸೂಕ್ತ ಕ್ರಮ ಕೈಗೊಳ್ಳುವುದು.
ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು.ಎಂದು ಆದೇಶ ದಲ್ಲಿ ಹೇಳಲಾಗಿದೆ.
