ಸುದ್ದಿ ಕನ್ನಡ ವಾರ್ತೆ

*ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ*ದಿಂದ
ಗಂಗಾವಳಿ-ಕರಾವಳಿ ಉಳಿಸಿ: ಜಾಗೃತಿ ಅಭಿಯಾನ ಜಾಥಾದ ಕರೆಯೋಲೆ

ಬಂಧುಗಳೇ, ನಮಸ್ಕಾರ.
ನಮ್ಮ ಜೀವನಾಡಿ, ಕಾಡಿನ ಉಸಿರು, ತಾಯಿಸ್ವರೂಪಿಯಾದ ಗಂಗಾವಳಿ-ಕರಾವಳಿ ನದಿಗಳನ್ನು ನಾಶಮಾಡುವ ಅವೈಜ್ಞಾನಿಕ ಯೋಜನೆಯು ಇಂದು ನಮ್ಮ ಕಣ್ಣೆದುರೇ ನಮ್ಮ ಅಸ್ತಿತ್ವಕ್ಕೆ ಸವಾಲಾಗಿ ನಿಂತಿದೆ. ಇಂದು ನಾವು ಮೌನವಾಗಿದ್ದರೆ, ನಮ್ಮ ಮುಂದಿನ ಪೀಳಿಗೆ ಹಾಗೂ ನಾವೆಲ್ಲರೂ ಕುಡಿಯುವ ನೀರಿಲ್ಲದೆ, ಹಸಿರು ನೆಲವಿಲ್ಲದೆ ಪರಿತಪಿಸುವ ಭೀಕರ ಕಾಲ ಬರಬಹುದು.
ಈ ವಿನಾಶಕಾರಿ ಯೋಜನೆಯನ್ನು ಕಿತ್ತೊಗೆಯಲು ಮತ್ತು ನಮ್ಮ ಪರಿಸರವನ್ನು ಉಳಿಸಿಕೊಳ್ಳಲು ಪರಮ ಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನ ಹಾಗೂ ಆದೇಶದಂತೆ, ಕಾರವಾರ, ಅಂಕೋಲಾ ಮತ್ತು ಗೋಕರ್ಣ ಚಲೋ ಬೃಹತ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.
ಜಾಥಾದ ವಿವರಗಳು ಹಾಗೂ ಕಾರ್ಯಕ್ರಮದ ರೂಪುರೇಷೆ ಹೀಗಿದೆ
ದಿನಾಂಕ: ಸೆಪ್ಟೆಂಬರ್ ೩, ಗುರುವಾರ
ಬೆಳಿಗ್ಗೆ ೯:೩೦: ಗೋಕರ್ಣ ತಲುಪುವುದು
ಮಧ್ಯಾಹ್ನ: ಕಾರವಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣ,ನಗರಸಭೆಗೆ ಮನವಿ, ಡಿಸಿಯವರಿಗೆ ಹಕ್ಕೋತ್ತಾಯ ಹಾಗೂ ಬೃಹತ್ ಸಭೆ
ಮಧ್ಯಾಹ್ನ ೩:೩೦: ಅಂಕೋಲಾ ತಾಲೂಕಾ ಪಂಚಾಯತಕ್ಕೆ ತೆರಳಿ ಮನವಿ ಸಲ್ಲಿಕೆ ಹಾಗೂ ವಾಪಸಾತಿ.ಸಮಾಜದ ಎಲ್ಲ ಬಂಧುಗಳ ಮಹಾಸಂಗಮ ಈ ಹೋರಾಟವು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿಲ್ಲ; ಇದು ನಮ್ಮೆಲ್ಲರ ಅಳಿವು-ಉಳಿವಿನ ಪ್ರಶ್ನೆ.
೧೬ ಸೀಮೆಯ ಎಲ್ಲಾ ಶಿಷ್ಯರು, ರಾಮಕ್ಷತ್ರಿಯ ಸಮಾಜ, ಸಿದ್ಧಿ ಸಮಾಜ, ಕುಣಬಿ, ಮರಾಠಿ ಸಮಾಜ ಸೇರಿದಂತೆ ಪ್ರತಿಯೊಬ್ಬ ಬಂಧುಗಳು, ತಾಯಂದಿರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು.
ಕುಳಿನಾಡು, ಕರೂರು ಹಾಗೂ ಭರತನಹಳ್ಳಿ ಸೀಮೆಗಳು ಈಗಾಗಲೇ ತಮ್ಮ ಸಿದ್ಧತೆಗಳನ್ನು ಚುರುಕುಗೊಳಿಸಿದ್ದು, ಪ್ರತಿಯೊಂದು ಸೀಮೆಯಿಂದ ಕನಿಷ್ಠ ೧೫ ವಾಹನಗಳಲ್ಲಿ ೭೫ ಕ್ಕೂ ಅಧಿಕ ಜನರು ಹಾಗೂ ಭಾಗೀ ಸೀಮೆಗಳಿಂದ ಕನಿಷ್ಠ ೨೫ ಜನ ಕಡ್ಡಾಯವಾಗಿ ಭಾಗವಹಿಸಬೇಕು ಎಂಬುದು ಪರಮಪೂಜ್ಯರ ಆದೇಶವಾಗಿದೆ.
• ಪರಿಸರ ಉಳಿವಿನ ಈ ಧರ್ಮಯುದ್ಧದಲ್ಲಿ ಐದುನೂರಕ್ಕೂ ಹೆಚ್ಚು ಜನ ಒಂದೇ ಕುಟುಂಬದಂತೆ ಒಗ್ಗೂಡಬೇಕಿದೆ. ಜಿಲ್ಲೆಯ ಜನಪ್ರತಿನಿಧಿಗಳೂ ನಮ್ಮೊಂದಿಗೆ ಕೈಜೋಡಿಸಲಿದ್ದಾರೆ.
• ಬನ್ನಿ, ವಾಹನಗಳ ಟೀಮ್‌ಗಳನ್ನು ಮಾಡಿ, ಬಂಧು-ಮಿತ್ರರನ್ನು ಹುರಿದುಂಬಿಸಿ ಈ ಜಾಥಾವನ್ನು ಅಭೂತಪೂರ್ವ ಯಶಸ್ವಿಗೊಳಿಸೋಣ. ಈ ವಿನಾಶಕಾರಿ ಯೋಜನೆಯನ್ನು ಬುಡಸಮೇತ ಕಿತ್ತೊಗೆಯಲು ಕೈಜೋಡಿಸಿ.
ನದಿ ನಮ್ಮ ಜೀವ, ನಿಸರ್ಗ ನಮ್ಮ ಹೆಮ್ಮೆ – ಉಳಿಸೋಣ ಬೇಡ್ತಿ-ಗಂಗಾವಳಿ-ಅಘನಾಷಿನಿ ಬೆಳೆಸೋಣ ನಮ್ಮ ನಾಡು ಒಗ್ಗಟ್ಟಿನಿಂದ ಹೋರಾಡೋಣ, ನದಿ ನಮ್ಮ ಆಸ್ತಿ ಎಂದು ಸಾರೋಣ!” ಇಂದು ನಾವು ಮೌನವಾದರೆ, ನಾಳೆ ಉಸಿರಾಡಲೂ ಕಷ್ಟ; ಎಚ್ಚೆತ್ತುಕೊಳ್ಳಿ ಕನ್ನಡಿಗರೇ!
(Slogans)
• “ಬೇಡ್ತಿ ನೀರನ್ನು ಬಿಡೆವು ಬಿಡೆವು, ಅಘನಾಶಿನಿ ನೀರನ್ನು ಕೊಡೆವು ಕೊಡೆವು”
• “ಹಸಿರೇ ಉಸಿರು – ನದಿಯೇ ಹಸಿರು”
• “ನದಿಗಳು ಉಳಿದರೆ ಉಳಿವುದು ನಾಡು – ನದಿಗಳು ಅಳಿದರೆ ಅಳಿವುದು ನಾಡು ”
• “ನದಿ ಉಳಿಸಿ – ನಾಡು ಉಳಿಸಿ, ಮುಂದಿನ ಪೀಳಿಗೆಗೆ ಬದುಕು ಉಳಿಸಿ.”
• “ಶಾಲ್ಮಲಾ ಹರಿವು ಸದಾ ಇರಲಿ – ನದಿ ತಿರುವು ಯೋಜನೆ ದೂರವಿರಲಿ.”
• “ಪರಿಸರ ಉಳಿಯಲಿ – ಪರಂಪರೆ ಬೆಳೆಯಲಿ.”
• ಗಂಗಾವಳಿ ಉಳಿಸಿರಿ, ಕರಾವಳಿ ಬೆಳೆಸಿರಿ, ಇದು *ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ*ದಿಂದ ಬಂದ ಸಂದೇಶ ವಾಗಿದೆ.