ಸುದ್ದಿ ಕನ್ನಡ ವಾರ್ತೆ

ಶಿರಸಿ:ಗಲ್ಲು ಶಿಕ್ಷೆಗೆ ಒಳಪಟ್ಟವನಿಗೆ ಕೂಡಾ ಅವನ ಕೊನೆಯ ಆಸೆಯನ್ನು ಹೇಳಲು ಅವಕಾಶವಿದೆ. ಆದರೆ ರೈತರಿಗೆ ಮೇಲ್ಮನವಿಗೆ ಅವಕಾಶ ನೀಡದೆ ಅರಣ್ಯ ಇಲಾಖೆ ಬೆಳ್ಳಂಬೆಳಗ್ಗೆ ಆಕ್ರಮಣಕಾರಿಯಾಗಿ ಬಂದು ರೈತರ ಜಮೀನನ್ನು ವಶಪಡಿಸಿಕೊಂಡು ಗಿಡನೆಡುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ವಿರೋಧಿ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಆಕ್ರೋಶ ವ್ಯಕ್ತಪಡಿಸಿದರು.

 

ಭಾನುವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ರೈತರ ಜೊತೆ ಸಮಾಲೋಚನೆ ನಡೆಸಿ ಮಾತನಾಡಿದ ಅವರು,
ಗೋಳಿಕಟ್ಟಾ ಗ್ರಾಮದ ಕಾಮಧೇನು ಹಾಲು ಮತ್ತು ಹಣ್ಣು ಸಂಸ್ಕರಣಾ ಸಂಸ್ಥೆಗೆ ಸೇರಿದ ಜಾಗದಲ್ಲಿ ರೈತರು ಭತ್ತ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ಜೀವನ ನಡೆಸುತ್ತಿದ್ದಾರೆ. ಇಲ್ಲಿರುವ ರೈತರು ಪಾಕಿಸ್ತಾನದವರೋ ಅಥವಾ ಬಾಂಗ್ಲಾದೇಶದಿಂದ ಬಂದವರಲ್ಲ.‌ಅವರೆಲ್ಲರೂ ಭಾರತೀಯರು. ಸರ್ಕಾರ ಇವರಿಗೆ ಮತದಾನದ ಹಕ್ಕು ನೀಡಿದೆ. ಇಲ್ಲಿನ ರೈತರು ಸರ್ಕಾರಕ್ಕೆ ಕಂದಾಯವನ್ನು ಕಟ್ಟುತ್ತಾರೆ. ಹಾಗಿದ್ದ ಮೇಲೆ ರೈತರ ಮೇಲೆ ದೌರ್ಜನ್ಯ ನಡೆಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಆಕ್ರಮಣದ ಹಿಂದೆ ಯಾರಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿದರು.

 

ಈ ಸಂಸ್ಥೆಗೆ ಸಂಬಂಧಿಸಿದ ಜಾಗದ ಕುರಿತು ನ್ಯಾಯಾಲಯದಲ್ಲಿ ಬಂದ ಆದೇಶವನ್ನು ಒಪ್ಪಿಕೊಳ್ಳೋಣ. ಆದರೆ ಜಾಗವನ್ನು ಖುಲ್ಲಾ ಪಡಿಸಲು ಅಥವಾ ತನ್ನ ವಶಕ್ಕೆ ಪಡೆಯಲು ಕಾನೂನಿನಲ್ಲಿ ತನ್ನದೇ ಆದ ಒಂದು ರೀತಿ ನಿಯಮಗಳಿವೆ.
ಅವರಿಗೂ ಕಾಲಾವಕಾಶ ನೀಡಬೇಕು. ರೈತರಿಗೆ ಸರಿಯಾದ ರೀತಿಯಲ್ಲಿ ಮಾಹಿತಿ ನೀಡಬೇಕಿತ್ತು. ತಡ ರಾತ್ರಿ ಇಂಗ್ಲಿಷ್ ನಲ್ಲಿರುವ 20 ಪುಟಗಳ ಆದೇಶ ಪತ್ರವನ್ನು ನೀಡಿ ಹೋಗಿದ್ದಾರೆ ಎಂದು ರೈತರು ಹೇಳುತ್ತಾರೆ. ಮುಂಜಾನೆ 5 ಗಂಟೆಗೆ ಜೆಸಿಬಿ ಸಮೇತ ಪೊಲೀಸ್ ಬಂದೋಬಸ್ತ್ ನಲ್ಲಿ ಬರುತ್ತಾರೆ ಎಂದರೆ ಇದರ ಹಿಂದೆ ಬಹುದೊಡ್ಡ ಹುನ್ನಾರವೇ ಇದ್ದಂತಿದೆ. ಅರಣ್ಯ ಇಲಾಖೆಯ ಈ ಕ್ರಮ ನಿಜಕ್ಕೂ ಖಂಡನೀಯ. ರೈತರ ಮೇಲೆ ಉದ್ದೇಶ ಪೂರ್ವಕವಾಗಿಯೇ ದೌರ್ಜನ್ಯ ನಡೆಸುತ್ತಿದೆ ಎನ್ನಿಸುತ್ತದೆ. ಯಾವ ಕಾರಣಕ್ಕೂ ರೈತರಿಗೆ ಅನ್ಯಾಯ ವಾಗಲು ನಾವು ಬಿಡುವುದಿಲ್ಲ. ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ.65 ವರ್ಷದಿಂದ ಇಲ್ಲಿರುವ ರೈತರನ್ನು ಸರ್ಕಾರ ಗುರುತಿಸಿ ಅವರಿಗೆ ಭೂಮಿಯನ್ನು ಸ್ವಲ್ಪವಾದರೂ ಭೂಮಿ ಮಂಜೂರಿ ಮಾಡುವ ಕೆಲಸ ಮಾಡಬೇಕು. ಇಲ್ಲಿನ ರೈತರನ್ನು ಏಕಾಏಕಿ ಒಕ್ಕಲೆಬ್ಬಿಸಿದರೆ ಇವರಿಗೆ ವಿಷ ಕುಡಿಯುವುದೇ ದಾರಿ ಯಾಗಲಿದೆ. ಹಾಗಾಗಿ ಸರ್ಕಾರ ರೈತರ ಪರವಾಗಿ ನಿಲ್ಲಬೇಕು ಎಂದು ಒತ್ತಾಯಿಸಿದರು.