ಸುದ್ದಿ ಕನ್ನಡ ವಾರ್ತೆ
ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮೂಲದ ಹಾಗೂ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾಗಿದ್ದ ಸುಬ್ರಮಣ್ಯ ಗೌಡ ಅವರು ಬ್ಯಾಡ್ಮಿಂಟನ್ ಆಡುತ್ತಿದ್ದ ವೇಳೆ ಏಕಾಏಕಿ ಎದೆನೋವಿನಿಂದ ಕುಸಿದು ಮೃತಪಟ್ಟಿದ್ದಾರೆ.
ಅಡಿಕೆ ಭವನದಲ್ಲಿ ಎಂದಿನಂತೆ ಶಟಲ್ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಅತ್ಯುತ್ತಮ ಕ್ರಿಕೆಟ್ ಆಲ್ ರೌಂಡರ ಆಟಗಾರರಾಗಿದ್ದ ಸುಬ್ರಮಣ್ಯ ಗೌಡ ಅವರ ಅಕಾಲಿಕ ನಿಧನದಿಂದ ವಿದ್ಯಾರ್ಥಿಗಳು, ಸಹೋದ್ಯೋಗಿಗಳು ಹಾಗೂ ಕ್ರೀಡಾಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.
ಯುವಕರು ಹಾಗೂ ಕ್ರೀಡಾಪಟುಗಳಲ್ಲಿ ಹಠಾತ್ ಹೃದಯಾಘಾತದ ಘಟನೆಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹೃದಯದ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ಹಾಗೂ ಅಗತ್ಯ ವೈದ್ಯಕೀಯ ತಪಾಸಣೆಗಳ ಮಹತ್ವವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.
