ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ ತಾಲೂಕಿನ ಕಳಚೆಯ ಸಹ್ಯಾದ್ರಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು ಸದೃಢವಾಗಿದ್ದು, ಸದಸ್ಯರ ಹಿತವನ್ನು ಲಕ್ಷ್ಯದಲ್ಲಿಟ್ಟುಕೊಂಡು ಸತ್ಕಾರ್ಯಗಳೊಂದಿಗೆ ಮುನ್ನಡೆಯುತ್ತಿದೆ ಎಂದು ಅಧ್ಯಕ್ಷ ಉಮೇಶ ಭಾಗ್ವತ ಹೇಳಿದರು.

ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳಚೆಯಲ್ಲಿ ಪ್ರಧಾನ ಕಚೇರಿ ಹೊಂದಿ ಹೆಬ್ಬಾರಕುಂಬ್ರಿ, ಯಲ್ಲಾಪುರ ಪಟ್ಟಣ, ಎಪಿಎಂಸಿಗಳಲ್ಲಿ ಶಾಖೆ ಹೊಂದಿದ್ದು, ಜೊಯಿಡಾ ಭಾಗದ ಅಡಕೆ ಬೆಳೆಗಾರರ ಅನುಕೂಲಕ್ಕಾಗಿ ಅಲ್ಲಿಯೂ ಒಂದು ಶಾಖೆ ಆರಂಭಿಸಿದ್ದೇವೆ . ಮುಂಡಗೋಡ ತಾಲೂಕಿನ ಅಡಕೆ ಬೆಳೆಗಾರರೂ ನಮ್ಮ ಎಪಿಎಂಸಿ ಶಾಖೆಯ ಮೂಲಕ ಸಾವಿರಾರು ಕ್ವಿಂಟಾಲ್ ಅಡಕೆ ಮಾರಾಟ ಮಾಡಿದ್ದಾರೆ. ಅಂಕೋಲಾ, ಜೊಯಿಡಾ ಮುಂತಾದ ಪ್ರದೇಶದ ರೈತರಿಂದ ಹೊರಭಾಗಕ್ಕೆ ಹೋಗುವ ಅಡಕೆಯನ್ನು ಯಲ್ಲಾಪುರದ ಮಾರುಕಟ್ಟೆಗೆ ತರುವ ಪ್ರಯತ್ನ ನಡೆಯುತ್ತಿದೆ. ನಮ್ಮ ಸಂಘವು ಕಳೆದ ಆರ್ಥಿಕ ಸಾಲಿನಲ್ಲಿ 60.48 ಲಕ್ಷ ರೂ ಲಾಭಗಳಿಸಿದೆ ಎಂದರು.

 

ಮಳೆಮಾಪನ ಕೇಂದ್ರ ಆಧರಿಸಿ ವಿಮಾ ಹಣ ನಿರ್ಧಾರ. ಮಳೆಮಾಪನ ಕೇಂದ್ರಗಳು ಸರಿಯಾಗಿಲ್ಲದ ಕಾರಣ ರೈತರಿಗೆ ಅನ್ಯಾಯವಾಗುತ್ತಿದೆ. ಪಕ್ಕದ ಗ್ರಾಮಗಳಿಗೆ ದೊರೆತ ವಿಮಾ ಮೊತ್ತಕ್ಕಿಂತ ಅರ್ಧದಷ್ಟು ನಮ್ಮ ಗ್ರಾಮಕ್ಕೆ ಬಂದಿಲ್ಲ. ಅದನ್ನು ಸರಿಪಡಿಸಲು ಗಂಭೀರ ಕ್ರಮ ಆಗಬೇಕೆಂದು ಸಂಘದಿಂದ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರಾಘವೇಂದ್ರ ಭಟ್ಟ ಕೋಣೆಮನೆ, ನಿರ್ದೇಶಕರಾದ ಶ್ರೀಕಾಂತ ಹೆಬ್ಬಾರ್, ಶ್ರೀಪಾದ ಗಾಂವ್ಕರ, ಶ್ರೀನಾಥ ಹೆಗಡೆ, ವಿನುತಾ ಗದ್ದೆ, ಪ್ರೇಮಾ ಹೆಗಡೆ, ರಾಮಕೃಷ್ಣ ಹೆಗಡೆ, ಮು.ಕಾ ದತ್ತಾತ್ರೇಯ ಹೆಗಡೆ, ಶಾಖಾ ವ್ಯವಸ್ಥಾಪಕ ಪರಶುರಾಮ ಮರಾಠೆ, ಅನಂತ ಹೆಗಡೆ, ಉದಯ ಭಾಗ್ವತ, ಆಂತರಿಕ ಲೆಕ್ಕ ಪರಿಶೋಧಕ ಎಂ.ಜಿ.ರೇವಣಕರ್ ಉಪಸ್ಥಿತರಿದ್ದರು.