ಸುದ್ಧಿಕನ್ನಡ ವಾರ್ತೆ
ಬೆಂಗಳೂರು:ಹೊರರಾಜ್ಯಗಳ ಗಡಿ ಕನ್ನಡಿಗರ ಸಮಸ್ಯೆಗಳ ಕುರಿತಂತೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಶ್ರೀಮತಿ ಉಮಾ ಮಹಾದೇವನ್, ಭಾ.ಆ.ಸೇ., ರವರ ಅಧ್ಯಕ್ಷತೆಯಲ್ಲಿ ದಿನಾಂಕ:10.08.2026 ರಂದು ಸೋಮವಾರ ಬೆಳಿಗ್ಗೆ:11.00ಗಂಟೆಗೆ ವಿಧಾನಸೌಧದಲ್ಲಿ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳು ಹಾಗೂ ಹೊರನಾಡಿನ ಪ್ರಮುಖರೊಂದಿಗೆ ಸಭೆ ನಡೆಯಿತು.
ಯೋಜನಾ ಇಲಾಖೆಯ ಕಾರ್ಯದರ್ಶಿಗಳಾದ ಡಾ. ತ್ರಿಲೋಕಚಂದ್ರ, ಭಾ.ಆ.ಸೇ., ಇವರು ಮಾತನಾಡಿ ಹೊರನಾಡ ಕನ್ನಡಿಗರು ದಿನ ನಿತ್ಯ ಅನುಭವಿಸುವ ಶೈಕ್ಷಣಿಕ, ಸಾಂಸ್ಕøತಿಕ, ಔದ್ಯೋಗಿಕ ಹಾಗೂ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಅಪರ ಮುಖ್ಯ ಕಾರ್ಯದರ್ಶಿಗಳ ಮೂಲಕ ಮುಖ್ಯಮಂತ್ರಿಗಳ ಅವಗಾಹನೆಗೆ ತರುವುದಾಗಿ ತಿಳಿಸಿದರು. ಇವುಗಳ ಪರಿಹಾರದ ಬಗ್ಗೆ ಇಲಾಖಾವಾರು ಸಮಸ್ಯೆಗಳ ಬಗ್ಗೆ ಚರ್ಚಿಸಿ, ಕ್ರಮಕೈಗೊಳ್ಳುವಂತೆ ಗಡಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಪ್ರಕಾಶ್ ಮತ್ತೀಹಳ್ಳಿ ಇವರು ಸಮಸ್ಯೆಗಳ ವಿವರಗಳನ್ನು ಇಲಾಖಾವಾರು ಸಮಸ್ಯೆ ಮತ್ತು ಆಗಬೇಕಾಗಿರುವ ಪರಿಹಾರದ ಬಗ್ಗೆ ವಿಷಯವಾರು ಸಭೆಗೆ ಮಂಡಿಸಿದರು.
ಈಗಾಗಲೇ ಹೊರರಾಜ್ಯದ ಕನ್ನಡ ಶಾಲೆಗಳಿಗೆ ಗಡಿ ಅಭಿವೃದ್ಧಿ ಪ್ರಾಧಿಕಾರ ಶಾಲಾ ಕೊಠಡಿ ನಿರ್ಮಾಣ/ಸಾಂಸ್ಕೃತಿಕ ಭವನ/ಸ್ಮಾರ್ಟ್ ಬೋರ್ಡ್/ಕನ್ನಡ ಮಾಧ್ಯಮದ ಪುಸ್ತಕ/ಶಾಲಾಕೊಠಡಿಗಳು/ ಗ್ರಂಥಾಲಯ/ನಲಿ-ಕಲಿ ಸಾಮಗ್ರಿಗಳನ್ನು ವಿತರಿಸುತ್ತಿರುವ ಬಗ್ಗೆ ಸಭೆಗೆ ತಿಳಿಸಿದರು.
ಹೊರರಾಜ್ಯಗಳ ಕನ್ನಡ ಮಾಧ್ಯಮ ಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಾತಿ, ಹೊರರಾಜ್ಯದ ಕನ್ನಡದ ವಿದ್ಯಾರ್ಥಿಗಳಿಗೆ ಕರ್ನಾಟಕದ ಮುರಾರ್ಜಿ, ರಾಣಿಚನ್ನಮ್ಮ ಮುಂತಾದ ಇತರೆ ವಸತಿನಿಲಯಗಳಿಗೆ ಪ್ರವೇಶಾತಿ, ಶಾಲಾ ಕೊಠಡಿಗಳ/ಗ್ರಂಥಾಲಯ/ಕನ್ನಡ ಭವನ ನಿರ್ಮಾಣ, ಉನ್ನತ ಶಿಕ್ಷಣಗಳಿಗೆ ರಾಜ್ಯದ ವಿದ್ಯಾರ್ಥಿಗಳಂತೆ ಹೊರರಾಜ್ಯದವರಿಗೆ ಸಮಾನ ಅವಕಾಶ, ಹೊರನಾಡ ಕನ್ನಡಿಗರಿಗೆ ಶೇ.5%ರ ಪ್ರತ್ಯೇಕ ಮೀಸಲಾತಿ ನೀಡಲು ನಿಯಮಗಳ ಪರಿಷ್ಕರಣೆ, ನಮ್ಮ ರಾಜ್ಯದ ಶಾಲಾಕಾಲೇಜುಗಳಿಗೆ ಹೊರನಾಡ ಕನ್ನಡಿಗರ ವಿಧ್ಯಾರ್ಥಿಗಳು ತೆರಳಲು ಮತ್ತು ಹೊರನಾಡ ಪತ್ರಕರ್ತರಿಗೆ ನಮ್ಮ ರಾಜ್ಯದ ಸರ್ಕಾರಿ ಬಸ್ ಗಳಲ್ಲಿ ಸಂಚರಿಸಲು ರಿಯಾಯಿತಿ ಪಾಸ್ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಇಲಾಖೆಗಳ ಕಾರ್ಯದರ್ಶಿಗಳು ಪ್ರಸ್ತಾವನೆಯನ್ನು ಆಯಾ ಇಲಾಖೆಗಳ ಮೂಲಕ ಮಾನ್ಯ ಮುಖ್ಯ ಕಾರ್ಯದರ್ಶಿಗಳ ಮತ್ತು ಮಾನ್ಯ ಮುಖ್ಯಮಂತ್ರಿಗಳ ಅವಗಾಹನೆಗೆ ತರಲು ಅಪರ ಮುಖ್ಯ ಕಾರ್ಯದರ್ಶಿಯವರು ಸೂಚಿಸಿದರು.
ಹೊರರಾಜ್ಯಗಳಲ್ಲಿರುವ 671 ಕನ್ನಡ ಮಾಧ್ಯಮ ಶಾಲೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಿಧ್ಯಾರ್ಥಿಗಳು ಇರುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಯಿತು.
ಮುಂದುವರೆದು, ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳು/ಶ್ರೀ ಸೋಮಣ್ಣ ಬೇವಿನಮರದ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಮಾಜಿ ಶಾಸಕರು, ಮಹಾರಾಷ್ಟ್ರದ ಜತ್ ತಾಲ್ಲೂಕಿನ ಮಾಜಿ ಶಾಸಕರಾದ ಶ್ರೀ ವಿಕ್ರಮ ಸಿಂಹ ಸಾವಂತ್, ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ಎಂ.ಟಿ. ರೇಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಮಂಜುಶ್ರೀ, ಶ್ರೀ ಡಿ. ಚಂದ್ರಶೇಖರಯ್ಯ, ನಿರ್ದೇಶಕರು, ಯೋಜನಾ ಇಲಾಖೆ, ಉನ್ನತ ಶಿಕ್ಷಣ/ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ/ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ/ ಗೋವಾದಿಂದ ಶ್ರೀ ಸಿದ್ದಣ್ಣ ಮೇಟಿ, ಕೇರಳದಿಂದ ಶ್ರೀ ಜಯಪ್ರಕಾಶ್ ತೊಟ್ಟೆತೋಡಿ ಮತ್ತು ಶ್ರೀ ಪ್ರದೀಪ್, ಮಹಾರಾಷ್ಟ್ರದಿಂದ ಶ್ರೀ ಮಲ್ಲಿಕ್ ಜಾನ್ ಶೇಖ್, ಶ್ರೀ ಸೋಮಶೇಖರ್ ಜಮಶೆಟ್ಟಿ, ತಮಿಳುನಾಡಿನಿಂದ ಡಾ. ಶಂಕರ್ ಮತ್ತು ಶ್ರೀ ದೊಡ್ಡ ಬಸಪ್ಪ, ಆಂಧ್ರದಿಂದ ಶ್ರೀ ಗುರುಬಸವರಾಜು ಮತ್ತು ಶ್ರೀ ಗಿರಿಜಾಪತಿ, ತೆಲಂಗಾಣದಿಂದ ಶ್ರೀ ನಿಜಾಮುದ್ದಿನ್ ಮತ್ತು ಶ್ರೀ ರಾಮಲಿಂಗಪ್ಪರವರು ಭಾಗವಹಿಸಿ ಅಲ್ಲಿನ ಕನ್ನಡಿಗರ ಜ್ವಲಂತ ಸಮಸ್ಯೆಗಳನ್ನು ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳ ಗಮನಕ್ಕೆ ತಂದರು ಹಾಗೂ ಈ ಸಮಸ್ಯೆಗಳು ಸುಮಾರು 50 ವರ್ಷಗಳಿಂದ ಹಾಗೆ ಉಳಿದಿದ್ದು, ಡಾ. ಬರಗೂರು ರಾಮಚಂದ್ರಪ್ಪ ವರದಿ ಹಾಗೂ ಶ್ರೀ ವಾಟಾಳ್ ನಾಗರಾಜುರವರ ವರದಿಗಳನ್ನು ಶೀಘ್ರ ಅನುಷ್ಠಾನ ಮಾಡಿ, ಅಲ್ಲಿ ಪಟ್ಟಿ ಮಾಡಿರುವ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹರಿಸಿ ಹೊರನಾಡು ಕನ್ನಡಿಗರಿಗೆ ಹಾಸ್ಟೆಲ್ ಪ್ರವೇಶ ಮತ್ತು ಪ್ರತ್ಯೇಕ ಶೇ.5ರ ಮೀಸಲಾತಿ ನೀಡುವಂತೆ ಮನವಿ ಸಲ್ಲಿಸಿದರು.
ಒಟ್ಟಾರೆ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸರ್ಕಾರದ ಹಂತದಲ್ಲಿ ಉನ್ನತ ಮಟ್ಟದ ಅಧಿಕಾರಿಗಳೊಡನೆ ಹೊರರಾಜ್ಯಗಳ ಗಡಿ ಕನ್ನಡಿಗರ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಪರಿಹಾರ ಕಂಡುಕೊಳ್ಳಲು ಉನ್ನತ ಮಟ್ಟದ ಸಭೆ ನಡೆಸಿ 3 ತಿಂಗಳಲ್ಲಿ ಈ ಬಗ್ಗೆ ಆಯಾ ಇಲಾಖೆಗಳು ಪ್ರಸ್ತಾವನೆಗಳನ್ನು ಯೋಜನಾ ಇಲಾಖೆಯ ಮತ್ತು ಮುಖ್ಯ ಕಾರ್ಯದರ್ಶಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳ ಅವಗಾಹನೆಗೆ ಮತ್ತು ಸೂಕ್ತ ಆದೇಶಕ್ಕಾಗಿ ಸಲ್ಲಿಸಲು ಸೂಚಿಸಿ, 3 ತಿಂಗಳೊಳಗಾಗಿ ಸೂಕ್ತ ತೀರ್ಮಾನ ತೆಗೆದುಕೊಂಡು ಸಲ್ಲಿಸಲು ಸೂಚಿಸಿದರು. 3 ತಿಂಗಳ ನಂತರ ಮತ್ತೊಮ್ಮೆ ಸಭೆ ಮಾಡಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳನ್ನು 6 ಹೊರರಾಜ್ಯಗಳ ಗಡಿ ಕನ್ನಡಿಗರ ಪರವಾಗಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಕೋರಿದರು ಮತ್ತು ಈ ಸಭೆಗೆ ವೈಯಕ್ತಿಕವಾಗಿ ಅಭಿನಂದನೆ ತಿಳಿಸಿದರು.
