ಸುದ್ಧಿಕನ್ನಡ ವಾರ್ತೆ
ಅಂಬೋಲಿ ಜಲಪಾತಲ್ಲಿ ಪ್ರವಾಸೋದ್ಯಮವನ್ನು ಆನಂದಿಸುತ್ತಿದ್ದಾಗ ಹಂಪಿಯ ಪ್ರವಾಸಿಗನೋರ್ವ ಹಾವುಕಚ್ಚಿ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಾವಂತವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂಗಾಧರ ಮಮಾರಪ್ಪ (38) ಎಂಬ ಪ್ರವಾಸಿಗನೇ ಹಾವು ಕಚ್ಚಿ ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ. ಈ ಘಟನೆಯ ನಂತರ ಕೂಡಲೇ ಈ ಪ್ರವಾಸಿಗರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಾಯಿತು. ಆದರೆ ಜನದಟ್ಟಣೆಯಲ್ಲಿ ಸಿಲುಕಿಕೊಂಡು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಲಭಿಸದೆಯೇ ಅವರು ಸಾವನ್ನಪ್ಪಿದ್ದಾರೆ.

ಕರ್ನಾಟಕದ ಹಂಪಿಯ ಕೆಲ ಪ್ರವಾಸಿಗರು ಅಂಬೋಲಿ ಪ್ರವಾಸೋದ್ಯಮದ ಆನಂದ ಸವಿಯಲು ಅಂಬೋಲಿ ಜಲಪಾತಕ್ಕೆ ಬಂದಿದ್ದರು. ಅಂಬೋಲಿಯ ಮುಖ್ಯ ಜಲಪಾತದಲ್ಲಿ ಬಂಡೆಯ ಮೇಲೆ ಕುಳಿತು ಸ್ನಾನ ಮಾಡುತ್ತಿದ್ದಾಗ ಗಂಗಾಧರ ಎಂಬ ಈ ಪ್ರವಾಸಿಗರಿಗೆ ಹಾವು ಕಚ್ಚಿತು. ಸ್ವಲ್ಪ ಸಮಯದ ನಂರತರ ಅವರು ಪ್ರಜ್ಞೆ ಕಳೆದುಕೊಂಡರು. ಕೂಡಲೇ ಅವರ ಬಾಯಲ್ಲಿ ನೊರೆ ಬರಲು ಪ್ರಾರಂಭಿಸಿತು. ಕೂಲೆ ಅವರನ್ನು ಅಂಬೋಲಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆ ಲಭಿಸದ ಕಾರಣ ಅವರನ್ನು ಸಾವಂತವಾಡಿಯ ಉಪಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.

 

ಅಂಬೋಲಿಯ ಮುಖ್ಯ ಜಲಪಾತದಲ್ಲಿ ಪ್ರವಾಸಿಗರ ಭಾರಿ ಗರ್ದಿಯಿತ್ತು. ಇದರಿಂದಾಗಿ ಜಲಪಾತದ ಮೇಲಿಂದ ಕೆಳಕ್ಕಿಳಿಯಲು ಸುಮಾರು ಎರಡೂವರೆ ಗಂಟೆ ಬೇಕಾಯಿತು. ಇದರಿಂದಾಗಿ ಚಿಕಿತ್ಸೆ ಲಭಿಸಲು ವಿಳಂಭವಾಗಿ ಪ್ರವಾಸಿಗ ಸಾವನ್ನಪ್ಪಿದರು.

ಈ ಪ್ರವಾಸಿಗರಿಗೆ ಕಚ್ಚಿರುವ ಹಾವು ನಾಗರ ಹಾವಾಗಿರಬಹುದು ಎಂದು ವೈದ್ಯಕೀಯ ಅಧಿಕಾರಿಗಳು ಅಂದಾಜಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.