ಸುದ್ದಿ ಕನ್ನಡ ವಾರ್ತೆ

ಭಟ್ಕಳ: ಗಲಾಟೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ತೆರಳಿದ್ದ ಮುರ್ಡೇಶ್ವರ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಗಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಶನಿವಾರ ಮಧ್ಯರಾತ್ರಿ ಮುರ್ಡೇಶ್ವರ ನಾಕಾ ಸಮೀಪ ನಡೆದಿದೆ.

ಘಟನೆಯಲ್ಲಿ ಕಾನ್‌ಸ್ಟೆಬಲ್‌ಗಳಾದ ವಿನಾಯಕ ಚಂದ್ರಹಾಸ ಶೆಟ್ಟಿ ಹಾಗೂ ಸಂಗಪ್ಪ ಹರಿಜನ ಗಾಯಗೊಂಡಿದ್ದು, ಆರ್‌ಎನ್‌ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ರಾಜು ಮಾದೇವ ನಾಯ್ಕ, ಹೃತಿಕ ಮಾದೇವ ನಾಯ್ಕ, ಮದನ ನಾಯ್ಕ, ಯೋಗೇಶ ನಾಯ್ಕ, ದರ್ಶನ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

ಆ.೯ರಂದು ರಾತ್ರಿ ಗಸ್ತಿನಲ್ಲಿದ್ದ ವೇಳೆ ಮುರ್ಡೇಶ್ವರ ನಾಕೆಯ ಬಳಿಯಲ್ಲಿ ಗಲಾಟೆ ನಡೆಯುತ್ತಿರುವ ಬಗ್ಗೆ ದೂರವಾಣಿ ಮೂಲಕ ಮಾಹಿತಿ ಬಂದ ಪ್ರಕಾರ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಹೊನ್ನಾವರ ಕಡೆಗೆ ಸಾಗುವ ಸರ್ವೀಸ್ ರಸ್ತೆಯಲ್ಲಿರುವ ಜ್ಯೂಸ್ ಸೆಂಟರ್ ಎದುರು ಆರೋಪಿಗಳು ಗುಂಪಾಗಿ ಸೇರಿದ್ದು, ಕೈಯಲ್ಲಿ ಚಾಕುವಿನಂತಹ ಆಯುಧಗಳನ್ನು ಹಿಡಿದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಮನೋಜ ನಾಯ್ಕ ಎಂಬಾತನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲು ಮುಂದಾಗಿದ್ದನ್ನು ಪೊಲೀಸರು ತಡೆಯಲು ಯತ್ನಿಸಿದಾಗ, ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಮಾದೇವ ನಾಯ್ಕ ಚಾಕುವಿನಿಂದ ವಿನಾಯಕ ಶೆಟ್ಟಿ ಅವರ ಎಡಗೈಗೆ ಇರಿದರೆ, ರಾಜು ಮಾದೇವ ನಾಯ್ಕ ಎನ್ನುವಾತ ಸಂಗಪ್ಪ ಹರಿಜನ ಅವರ ಬಲಗೈಗೆ ಇರಿದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪೊಲೀಸ್ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮತ್ತೆ ತಮ್ಮ ವಿಚಾರಕ್ಕೆ ಬಂದರೆ ಜೀವಂತವಾಗಿ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದೂ ದೂರಿನಲ್ಲಿ ತಿಳಿಸಲಾಗಿದ್ದು ಬಳಿಕ ಆರೋಪಿಗಳು ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಸ್ಥಳದಿಂದ ತೆರಳಿದ್ದಾರೆ ಎನ್ನಲಾಗಿದೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಹಲ್ಲೆ, ಜೀವ ಬೆದರಿಕೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.