Banner Ad

ಸುದ್ದಿ ಕನ್ನಡ ವಾರ್ತೆ

ಚಿಕ್ಕಬಳ್ಳಾಪುರ:ತಾಲ್ಲೂಕಿನ ನಂದಿ ಗಿರಿಧಾಮದಲ್ಲಿ ಭಾನುವಾರ ನಡೆದ ನಂದಿ ಹಿಲ್ಸ್‌ ಮಾನ್ಸೂನ್ ಮ್ಯಾರಥಾನ್ ವೇಳೆ 21 ಕಿ.ಮೀ ಓಟದಲ್ಲಿ ಭಾಗವಹಿಸಿದ್ದ ಕ್ರೀಡಾಪಟುವೊಬ್ಬರು ಓಡುತ್ತಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟಿರುವ ದುರಂತ ನಡೆದಿದೆ.
ಮೃತರನ್ನು ಪಂಜಾಬ್ ಮೂಲದ ಅಮನ್ ದೀಪ್ ಸಿಂಗ್ ಜಗಡೆ (31) ಎಂದು ಗುರುತಿಸಲಾಗಿದೆ. ಬೆಂಗಳೂರು ಮಾನ್ಯತಾ ಟೆಕ್ ಪಾರ್ಕ್‌ನ ಖಾಸಗಿ ಕಂಪನಿಯೊಂದರಲ್ಲಿ ಈತ ಉದ್ಯೋಗದಲ್ಲಿದ್ದರು.

Banner Ad

ಭಾನುವಾರ ನಂದಿ ಹಿಲ್ಸ್ ಮಾನ್ಸೂನ್ ಮ್ಯಾರಥಾನ್‌ 10 ಕಿ.ಮೀ ಹಾಗೂ 21 ಕಿ.ಮೀ ವಿಭಾಗಗಳಲ್ಲಿ 4,500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.
ಕರ್ನಾಟಕ ಯುವಜನ ಕ್ರೀಡಾ ಅಭಿವೃದ್ಧಿ ಇಲಾಖೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಸಹಯೋಗದಲ್ಲಿ ಮ್ಯಾರಥಾನ್ ಆಯೋಜಿಸಲಾಗಿತ್ತು.

ಮೃತ ಅಮನ್ ದೀಪ್ ಸಿಂಗ್ 21 ಕಿ.ಮೀ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದರು. ನಂದಿ ಬೆಟ್ಟದ ಅರ್ಧ ಭಾಗದ ಓಟ ಪೂರ್ಣಗೊಳಿಸಿದ್ದ ವೇಳೆ ಕುಸಿದು ಬಿದ್ದ ಅವರನ್ನು ಮುದ್ದೇನಹಳ್ಳಿ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮ್ಯಾರಥಾನ್‌ಗೆ ಮುನ್ನ ಅಮನ್ ದೀಪ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ‘ದೇವರು ನನ್ನ ಜೊತೆ ಇದ್ದಾನೆ’ ಎಂದು ಬರೆದುಕೊಂಡಿದ್ದರು.

Banner Ad