ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ನಗರಿ ಗ್ರಾಮದಲ್ಲಿ ಕಾಡು ಕರಡಿಯೊಂದು ಜೇನು ಕೃಷಿ ಕೇಂದ್ರದ ಮೇಲೆ ದಾಳಿ ನಡೆಸಿ, ಪ್ರಗತಿಪರ ರೈತ ವಿಶ್ವನಾಥ ನಾಯ್ಕ ಅವರಿಗೆ ಸೇರಿದ ಜೇನುಪೆಟ್ಟಿಗೆಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.

​ನಗರಿ ಗ್ರಾಮದ ನಿವಾಸಿ ವಿಶ್ವನಾಥ ನಾಯ್ಕ ಅವರು ತಮ್ಮ ತೋಟದ ಆವರಣದಲ್ಲಿ ಜೇನು ಸಾಕಾಣಿಕೆ ಮಾಡುತ್ತಿದ್ದರು. ಅಗಸ್ಟ್ 2ರ ಮುಂಜಾನೆ ಅರಣ್ಯ ಪ್ರದೇಶದಿಂದ ಆಹಾರ ಅರಸಿ ಬಂದ ಕಾಡು ಕರಡಿಯು ಜೇನು ತುಪ್ಪ ತಿನ್ನುವ ಆಸೆಯಿಂದ ಜೇನುಪೆಟ್ಟಿಗೆಗಳ ಮೇಲೆ ದಾಳಿ ಮಾಡಿದೆ.

 

ಕರಡಿಯು ಅಲ್ಲಿದ್ದ ಜೇನುಪೆಟ್ಟಿಗೆಗಳನ್ನು ನೆಲಕ್ಕೆ ತಳ್ಳಿ, ಅವುಗಳನ್ನು ಸಂಪೂರ್ಣವಾಗಿ ಒಡೆದು ಹಾಕಿ ತಿಂದಿದೆ.
​ದಾಳಿಯ ತೀವ್ರತೆಗೆ ವಿಶ್ವನಾಥ ನಾಯ್ಕ ಅವರಿಗೆ ಸೇರಿದ ಜೇನುಪೆಟ್ಟಿಗೆಗಳು ಮತ್ತು ಅದರ ಒಳಗಿದ್ದ ಜೇನುನೊಣಗಳ ಚೌಕಟ್ಟುಗಳು (frames) ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಭಾರಿ ಆರ್ಥಿಕ ನಷ್ಟ ಸಂಭವಿಸಿದೆ.

​ಸ್ಥಳೀಯರಲ್ಲಿ ಹೆಚ್ಚಿದ ಆತಂಕ..!
​ಜೋಯಿಡಾ ತಾಲೂಕಿನ ವಿವಿಧ ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕರಡಿಗಳ ಹಾವಳಿ ಹೆಚ್ಚಾಗುತ್ತಿರುವುದು ಸ್ಥಳೀಯರಲ್ಲಿ ತೀವ್ರ ಭೀತಿ ಹುಟ್ಟಿಸಿದೆ. ಕೃಷಿ ತೋಟಗಳ ಬಳಿಯೇ ಕರಡಿಗಳು ಲಗ್ಗೆ ಇಡುತ್ತಿರುವುದರಿಂದ ರೈತರು ಒಂಟಿಯಾಗಿ ತೋಟಗಳಿಗೆ ಹಾಗೂ ಕಾಡಿನಂಚಿನ ಪ್ರದೇಶಗಳಿಗೆ ಹೋಗಲು ಭಯಪಡುವಂತಾಗಿದೆ.