ಸುದ್ಧಿಕನ್ನಡ ವಾರ್ತೆ
Goa: ಗೋವಾ ರಾಜ್ಯದಲ್ಲಿ ನಡೆಯಲಿರುವ 55 ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿದ್ಧತೆಗಳು ಮುಕ್ತಾಯದ ಹಂತದಲ್ಲಿವೆ. ನವೆಂಬರ್ 15 ರೊಳಗೆ ಇಫ್ಫಿಗೆ ಸಂಬಂಧಿಸಿದ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ಇದಾದ ಬಳಿಕ 18 ರಂದು ಮತ್ತೆ ಕಾಮಗಾರಿ ಪರಿಶೀಲನೆ ನಡೆಯಲಿದೆ. ಈ ಬಾರಿಯ ಇಫಿ, ಶಿಗಮೋತ್ಸವ ಹಾಗೂ ಕಾರ್ನಿವಲ್ ನಲ್ಲಿ ಬಹುಮಾನ ಪಡೆದ ಚಿತ್ರರಥಗಳ ವಿಶೇಷ ಮೆರವಣಿಗೆ ನಡೆಯಲಿದೆ ಎಂದು ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಮಾಹಿತಿ ನೀಡಿದರು. ಇಂದು ಸೋಮವಾರ, ಅವರು ವಿವಿಧ ಇಲಾಖೆಗಳೊಂದಿಗೆ ಐಎಫ್‍ಎಫ್‍ಐ ಕಾರ್ಯವನ್ನು ಪರಿಶೀಲಿಸಿದರು. ಮುಖ್ಯ ಕಾರ್ಯದರ್ಶಿ ಡಾ. ವಿ ಕಂದವೇಲು, ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

20 ರಂದು ಐಎಫ್‍ಎಫ್‍ಐ ಉದ್ಘಾಟನೆ ಮತ್ತು 28 ರಂದು ಸಮಾರೋಪ ಸಮಾರಂಭ ಡಾ. ಶಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ನಡೆಯಲಿದೆ. 22 ರಂದು ಗೋವಾ ಎಂಟರ್‍ಟೈನ್‍ಮೆಂಟ್ ಸೊಸೈಟಿ (ಇಎಸ್‍ಜಿ)ಯಿಂದ ಕಲಾ ಅಕಾಡೆಮಿವರೆಗೆ ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದ ವಿಷಯಾಧಾರಿತ ಚಿತ್ರರಥ ಮೆರವಣಿಗೆ ನಡೆಯಲಿದೆ. ಈ ವರ್ಷ, ಮೊದಲ ಬಾರಿಗೆ, ವಾಗಾತೋರ್‍ನ ಪಾಕಿರ್ಂಗ್ ಪ್ರದೇಶದಲ್ಲಿ ತೆರೆದ ಜಾಗದಲ್ಲಿ ಸ್ಕ್ರೀನಿಂಗ್ ನಡೆಯಲಿದೆ. ಮಿರಾಮರ್ ಬೀಚ್ ನಲ್ಲಿಯೂ ಸ್ಕ್ರೀನಿಂಗ್ ಸೌಲಭ್ಯಗಳನ್ನು ಸಹ ಹೊಂದಿರುತ್ತದೆ. ಈ ಎರಡೂ ಸ್ಥಳಗಳಲ್ಲಿ ಉಚಿತ ಸಿನಿಮಾಗಳನ್ನು ಪ್ರದರ್ಶಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಐಎಫ್‍ಎಫ್‍ಐ ಪ್ರತಿನಿಧಿಗಳು ಅಯನಾಕ್ಸ್ ಪಣಜಿ ಮತ್ತು ಮಡಗಾಂವ್, ಮ್ಯಾಜಿಕ್ ಮೂವಿ ಫೋಂಡಾ, ಸಾಮ್ರಾಟ್ ಅಶೋಕ್ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ. ಕಲಾ ಅಕಾಡೆಮಿಯಲ್ಲಿ ಕೇವಲ ‘ಮಾಸ್ಟರ್ ಕ್ಲಾಸ್’ ಮತ್ತು ‘ಸಂವಾದದಲ್ಲಿ’ ಸೆಷನ್‍ಗಳನ್ನು ಆಯೋಜಿಸಲಾಗಿದೆ. ಇಎಸ್‍ಜಿ ಮುಂಭಾಗದ ಜಾಗದಲ್ಲಿ ಆಹಾರ ಮತ್ತು ಕರಕುಶಲ ಮಳಿಗೆಗಳನ್ನು ಸ್ಥಾಪಿಸಲಾಗುವುದು. ಯೋಗಸೇತು ಬಳಿ ವಿಶೇಷ ವಸ್ತುಪ್ರದರ್ಶನ ನಡೆಯಲಿದೆ ಎಂದೂ ಮುಖ್ಯಮಂತ್ರಿ ಹೇಳಿದರು.

3659 ಪ್ರತಿನಿಧಿಗಳ ನೋಂದಣಿ
ಇದುವರೆಗೆ 3659 ಪ್ರತಿನಿಧಿಗಳು ಐಎಫ್‍ಎಫ್‍ಐಗೆ ನೋಂದಾಯಿಸಿಕೊಂಡಿದ್ದಾರೆ. ಮುಂದಿನ ಹತ್ತು ದಿನಗಳಲ್ಲಿ ನೋಂದಣಿ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ 8ರಿಂದ 9 ಸಾವಿರ ಪ್ರತಿನಿಧಿಗಳು ಇದಕ್ಕೆ ನೋಂದಣಿಯಾಗುತ್ತಾರೆ. ರಾಜ್ಯ ಸರ್ಕಾರದಿಂದ ಈ ವರ್ಷದ ಐಎಫ್‍ಎಫ್‍ಐಗೆ ಸುಮಾರು 26 ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.