ಸುದ್ದಿ ಕನ್ನಡ ವಾರ್ತೆ
ಬಡಗು ತಿಟ್ಟಿನ ಯಕ್ಷಗಾನ ಕ್ಷೇತ್ರದ ಅಪರೂಪದ ಹಾಸ್ಯ ಕಲಾವಿದ, ತಮ್ಮ ಸಹಜ ಹಾಗೂ ಸಭ್ಯ ಹಾಸ್ಯದಿಂದ ಸಾವಿರಾರು ಪ್ರೇಕ್ಷಕರ ಮನಗೆದ್ದ ಶ್ರೀಧರ ಭಟ್ಟ ಕಾಸರಗೋಡ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಯಿತು. ಅವರ ಅಗಲಿಕೆ ನಮ್ಮ ಯಕ್ಷಗಾನ ಲೋಕಕ್ಕೆ ನಿಜಕ್ಕೂ ತುಂಬಲಾರದ ನಷ್ಟವಾಗಿದೆ.ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕಂಬನಿ ಮಿಡಿದಿದ್ದಾರೆ.
ಹಾಸ್ಯ ಚಕ್ರವರ್ತಿ ಕುಂಜಾಲು ರಾಮಕೃಷ್ಣರ ನಂತರ ಬಡಗು ತಿಟ್ಟಿನ ಯಕ್ಷಗಾನದಲ್ಲಿ ಹಾಸ್ಯ ಪಾತ್ರಗಳಿಗೆ ಹೊಸ ಆಯಾಮ ನೀಡಿದ ಅಪರೂಪದ ಶಕ್ತಿ ಶ್ರೀಧರ ಭಟ್ಟರದ್ದಾಗಿತ್ತು. ಎಂದಿಗೂ ಅಪಹಾಸ್ಯಕ್ಕೆ ಆಸ್ಪದ ನೀಡದೆ, ಅತ್ಯಂತ ಸಭ್ಯ, ಸೊಗಸಾದ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಒಳಗೊಂಡ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ವಿಶಿಷ್ಟ ಶೈಲಿ ಅವರದ್ದಾಗಿತ್ತು.
ಹಲವು ದಶಕಗಳ ಕಾಲ ಯಕ್ಷರಂಗದಲ್ಲಿ ಅನನ್ಯ ಸೇವೆ ಸಲ್ಲಿಸಿದ ಅವರು ತಮ್ಮ ನೈಜ ಅಭಿನಯ, ಸಮಯೋಚಿತ ಸಂಭಾಷಣೆ ಹಾಗೂ ಸಹಜ ಹಾಸ್ಯದ ಮೂಲಕ ಪ್ರತಿಯೊಬ್ಬ ಕಲಾಭಿಮಾನಿ ಯ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದರು . ಅವರ ಅಗಲಿಕೆಯಿಂದ ಬಡಗು ತಿಟ್ಟಿನ ಯಕ್ಷಗಾನ ಕ್ಷೇತ್ರ ಇಂದು ಅತ್ಯುತ್ತಮ ಕಲಾವಿದನೊಬ್ಬನನ್ನು ಕಳೆದುಕೊಂಡು ಬಡವಾಗಿದೆ.
ಭಗವಂತನು ಅಗಲಿದ ಚೇತನಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಅವರ ಕುಟುಂಬ ವರ್ಗದವರಿಗೆ, ಅಪಾರ ಅಭಿಮಾನಿಗಳಿಗೆ ಹಾಗೂ ಯಕ್ಷಗಾನ ಕಲಾಬಂಧುಗಳಿಗೆ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.ಎಂದು
ವಿಶ್ವೇಶ್ವರ ಹೆಗಡೆ ಕಾಗೇರಿ,ಸಂಸದರು ಉತ್ತರ ಕನ್ನಡ ಅವರು ಹೇಳಿಕೆ ನೀಡಿದ್ದಾರೆ.
