ಸುದ್ಧಿಕನ್ನಡ ವಾರ್ತೆ
ಪಣಜಿ: ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ NEP ಅನುಷ್ಠಾನಗೊಳಿಸುವಲ್ಲಿ ಗೋವಾ ರಾಜ್ಯ ಮುಂಚೂಣಿಯಲ್ಲಿದೆ, ಇದು ನಮಗೆ ಹೆಮ್ಮೆಯ ವಿಷಯ. ರಾಷ್ಟ್ರೀಯ ಶಿಕ್ಷಣ ನೀತಿ (NEP) ಯಿಂದಾಗಿ ಬದಲಾದ ಪಠ್ಯಕ್ರಮದ ಉತ್ತಮ ಫಲಿತಾಂಶ ಕಾಣಲು ಪ್ರಾರಂಭಿಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ 10 ಮತ್ತು 11 ನೇಯ ತರಗತಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.
ಗೋವಾದ ದೋನಾಪೌಲಾದಲ್ಲಿ ಬುಧವಾರ ಆಯೋಜಿಸಿದ್ದ “ಶಿಕ್ಷಾ ಸಮಾಗಮ್-2026” ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

 

ದೇಶದಲ್ಲಿ 40 ವರ್ಷಗಳ ಕಾಲ ಒಂದೇ ಪಠ್ಯಕ್ರಮವನ್ನು ಕಲಿಸಲಾಗುತ್ತಿತ್ತು. 2014 ರ ನಂತರ ಅದನ್ನು ಬದಲಾಯಿಸಲು ನಿರ್ಧರಿಸಲಾಯಿತು. ತಜ್ಞರ ಅಭಿಪ್ರಾಯಗಳನ್ನು ತೆಗೆದುಕೊಂಡು ಎನ್ ಇ ಪಿ 2020 ನ್ನು ತರಲಾಯಿತು. ಅದರಂತೆ ವಿದ್ಯಾರ್ಥಿಗಳು ಕೇವಲ ಪರೀಕ್ಷೆ ಬರೆಯುವವರಾಗದಂತೆ ಹಲವು ಬದಲಾವಣೆಗಳನ್ನು ತರಲಾಯಿತು. ಎನ್ ಇ ಪಿ ಮೂಲಕ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣವನ್ನು ನೀಡಲಾಗುತ್ತದೆ ಮತ್ತು ಅವರ ಸೃಜನಶೀಲತೆಯನ್ನು ಹೆಚ್ಚಿಸಲಾಗುತ್ತದೆ. ಗೋವಾ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಿದೆ. ತಂತ್ರಜ್ಞಾನ ಬಂದರೂ ಅದು ಶಿಕ್ಷಕರನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ, ಶಿಕ್ಷಕರು ತಂತ್ರಜ್ಞಾನವನ್ನು ಬಳಸಬೇಕಾಗಿದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ಕೇವಲ ಪರೀಕ್ಷಾರ್ಥಿಗಳಾಗಬಾರದು. ಪಠ್ಯಕ್ರಮದ ಮೂಲಕ ಹೊಸ ಕೌಶಲ್ಯಗಳನ್ನು ಕಲಿಯಲು ಪ್ರಯತ್ನಿಸಬೇಕು. ಕೆಲವು ದಿನಗಳ ಹಿಂದೆ ನಡೆದದ ನೀಟ್ ಪರೀಕ್ಷೆಗೆ ಸಂಬಂಧಿಸದಂತೆ ಪಣಜಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ನಾವು ಇದರ ಬಗ್ಗೆ ಏನೂ ಹೇಳಿರಲಿಲ್ಲ. ಪ್ರತಿಭಟನೆಯ ಸಂದರ್ಭದಲ್ಲಿ ಗೋವಾದ ಹೊರಗಿನ ವ್ಯಕ್ತಿಯೊಬ್ಬರು “ಉಮರ್ ಖಾಲಿದ್ ರವರನ್ನು ಮುಕ್ತಗೊಳಿಸಿ” ಎಂಬ ಪೋಸ್ಟರ್ ತೋರಿಸಿದರು. ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲ್ಪಟ್ಟ ವ್ಯಕ್ತಿಯನ್ನು ಬೆಂಬಲಿಸುವುದು ತಪ್ಪು. ಗೋವಾದಲ್ಲಿ ಧಾರ್ಮಿಕ ಸಾಮರಸ್ಯವನ್ನು ಹಾಳುಮಾಡುವ ಪ್ರಯತ್ನ ಯಶಸ್ವಿಯಾಗಲು ನಾವು ಬಿಡುವುದಿಲ್ಲ. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ರಾಷ್ಟ್ರೀಯತಾವಾದಿ ದೃಷ್ಠಿಕೋನಗಳೊಂದಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ನಾವು ಬಯಸುತ್ತೇವೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.

ಈ ಸಂದರ್ಭದಲ್ಲಿ ರಾಜ್ಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಪ್ರಸಾದ ಲೋಲಯೇಕರ್, ನಿರ್ದೇಶಕ ಶೈಲೇಶ್ ಜಿಂಗಡೆ, ಉನ್ನತ ಶಿಕ್ಷಣ ನಿರ್ದೇಶನಾಲಯದ ಭೂಷಣ ಸಾವೈಕರ್, ಇಂದ್ರಾಣಿ ಬಾದುರಿ, ಮೇಘನಾ ಶೆಟಗಾಂವಕರ್ ಮತ್ತಿತರರು ಉಪಸ್ಥಿತರಿದ್ದರು.