ಸುದ್ದಿ ಕನ್ನಡ ವಾರ್ತೆ
ಭಟ್ಕಳ: ಚಿನ್ನದ ಸರವನ್ನು ದರೋಡೆ ಮಾಡಿಕೊಂಡು ಹೋದ ೨೪ ಗಂಟೆಯಲ್ಲೇ ಪ್ರಕರಣ ಭೇದಿಸಿದ ಮುರ್ಡೇಶ್ವರ ಪೊಲೀಸರು ಆರೋಪಿಯನ್ನು ಬಂಧಿಸಿ ಚಿನ್ನದ ಸರವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವೀಯಾಗಿದ್ದಾರೆ.
ತಾಲೂಕಿನ ರಾಷ್ಟ್ರೀಯ ಹೆದ್ದಾರಿ-೬೬ರ ದೊಡ್ಡ ಬಲಸೆ ಕ್ರಾಸ್ ಬಳಿ ಸೋಮವಾರ ರಾತ್ರಿ ನಡೆದ ಚಿನ್ನದ ಸರ ಸುಲಿಗೆ ಪ್ರಕರಣವನ್ನು ಮುರ್ಡೇಶ್ವರ ಪೊಲೀಸರು ಕೇವಲ ೨೪ ಗಂಟೆಯಲ್ಲೇ ಭೇದಿಸಿ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಸ್ಥಳೀಯವಾಗಿ ದೊರೆತ ಸುಳಿವು ಮತ್ತು ಸಾಂದರ್ಭಿಕ ಸಾಕ್ಷಗಳನ್ನು ಕಲೆ ಹಾಕಿದ ಪೊಲೀಸರು ಆರೋಪಿ ಹಲ್ಲಂದಿ ಕಟಗಾರ ಕೊಪ್ಪ ನಿವಾಸಿ ನಾಗರಾಜ ಗಣಪತಿ ಗೊಂಡ (೨೯) ಎನ್ನುವವನ್ನು ಬಂಧಿಸಿದ್ದಾರೆ. ಬಂಧಿತನಿAದ ಚಿನ್ನದ ಸರ, ಕೃತ್ಯಕ್ಕೆ ಬಳಸಿದ್ದ ಬೈಕು ಹಾಗೂ ಮೊಬೈಲ್ ಫೋನ್ ವಶಕ್ಕೆ ಪಡೆದು ಇನ್ನೊರ್ವನಿಗಾಗಿ ಹುಡುಕಾಟ ನಡೆಸಿದ್ದಾರೆ.
ಎಸ್.ಪಿ. ಶ್ಲಾಘನೆ: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎನ್.ಎಂ., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಹಾಗೂ ಡಿವೈಎಸ್ಪಿ ಗಿರೀಶ ಬಿ. ಅವರ ಮಾರ್ಗದರ್ಶನದಲ್ಲಿ, ಮುರ್ಡೇಶ್ವರ ವೃತ್ತದ ಸಿಪಿಐ ಜಗದೀಶ ಹಂಚಿನಾಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ಪಿಎಐ ಹಣಮಂತ ಬಿರಾದಾರ ಹಾಗೂ ಸಿಬ್ಬಂದಿಗಳಾದ ಸುಬ್ರಹ್ಮಣ್ಯ ನಾಯ್ಕ, ಅರುಣ್ ಪಿಂಟೋ, ಮಂಜುನಾಥ ಲಕ್ಕಾಪುರ, ಬಿಲಾಲ್ ಅಹ್ಮದ್ ಸಿದ್ದಾಪೂರ, ವಿಜಯ ನಾಯ್ಕ, ಮಹೇಶ್ ಸಮನಳ್ಳಿ, ಸಿದ್ದಪ್ಪ ಕಾಂಬಳೆ ಮತ್ತು ಸದಾಶಿವ ಕಟ್ಟಿಮನಿ ತಾಂತ್ರಿಕ ಮಾಹಿತಿ ಹಾಗೂ ಸ್ಥಳೀಯ ಸುಳಿವಿನ ಆಧಾರದಲ್ಲಿ ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವೀಯಾಗಿದ್ದಾರೆ. ಪೊಲೀಸ್ ತಂಡವನ್ನು ಎಸ್.ಪಿ. ದೀಪನ್ ಎಂ.ಎನ್ ಶ್ಲಾಘಿಸಿದ್ದಾರೆ.
