ಸುದ್ದಿ ಕನ್ನಡ ವಾರ್ತೆ
ಸಿದ್ದಾಪುರ: ಯಾವುದೇ ಶಾಲೆ ಉತ್ತಮ ಶಾಲೆಯೆಂದು ರೂಪಗೊಳ್ಳುವುದು ಅಲ್ಲಿರುವ ಒಳ್ಳೆಯ ಶಿಕ್ಷಕರಿಂದ. ಅವರು ಮಕ್ಕಳಿಗೆ ಶಿಕ್ಷಣದ ಜೊತೆಗೆ ನೀಡುವ ಸಂಸ್ಕಾರದಿಂದ ಉತ್ತಮ ಶಾಲೆಯಾಗಿ ರೂಪಗೊಳ್ಳುತ್ತದೆ ಎಂದು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಅನಂತಮೂರ್ತಿ ಹೆಗಡೆ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ತ್ಯಾಗಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಟ್ರಸ್ಟ್‌ನಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿ ಮಾತನಾಡಿದರು.”ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಪೋಷಣೆ ಮಾಡುತ್ತಾರೆ, ಅಂತಹ ಶಿಕ್ಷಕರಿಂದಲೇ ಅದು ಉತ್ತಮ ಶಾಲೆ ಎನಿಸಿಕೊಳ್ಳಲು ಸಾಧ್ಯ. ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ನಾವೆಲ್ಲರೂ ಸೇರಿ ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗಿಂತ ಗುಣಮಟ್ಟದ ಶಿಕ್ಷಣ ನೀಡುವಂತಾಗಲು ಎಲ್ಲರೂ ಕೈಜೋಡಿಸಬೇಕು” ಎಂದ ಅವರು, “ನಾವು ಸೇವಿಸುವ ಆಹಾರ ಮತ್ತು ನೀರನ್ನು ಸ್ವಚ್ಛವಾಗಿ ಹಾಗೂ ಶುದ್ಧವಾಗಿ ಸ್ವೀಕರಿಸಬೇಕು, ಆಗ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ನಾವು ಅನೇಕ ಸರ್ಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡಿದ ಮೇಲೆ ಆ ಶಾಲೆಗಳ ವಾತಾವರಣ ಬದಲಾಗಿರುವುದನ್ನು ಗಮನಿಸಿದ್ದೇವೆ. ಮಳೆಗಾಲದಲ್ಲಿ ಬಹಳಷ್ಟು ಮಕ್ಕಳಿಗೆ ಜ್ವರ, ನೆಗಡಿ ಬಂದು ಶಾಲೆಗೆ ಗೈರುಹಾಜರಾಗುತ್ತಿದ್ದರು. ಶಾಲೆಗೆ ನಾವು ವಾಟರ್ ಫಿಲ್ಟರ್ ನೀಡಿದ ಮೇಲೆ ಬಹಳಷ್ಟು ಮಕ್ಕಳ ಆರೋಗ್ಯ ಸುಧಾರಣೆಯಾಗಿದೆ. ಹಾಜರಾತಿ ಸಂಖ್ಯೆಯೂ ಕೂಡ ಜಾಸ್ತಿಯಾಗಿದೆ ಎಂದು ಶಿಕ್ಷಕರು ಹಾಗೂ ಪಾಲಕರು ಹೇಳಿದ್ದಾರೆ” ಎಂದರು.
ಶಾಲೆಯ ಎಸ್‌ಡಿಎಂಸಿ (SDMC) ಅಧ್ಯಕ್ಷರಾದ ರಾಜಾರಾಮ ಹೆಗಡೆ ಮಾತನಾಡಿ, “ನಮ್ಮೂರಿನ ಶಾಲೆಗೆ ವಾಟರ್ ಫಿಲ್ಟರ್ ನೀಡಿರುವುದಕ್ಕೆ ಧನ್ಯವಾದಗಳು. ನೀವು ತಾಲೂಕಿನ ಹಾಗೂ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸರ್ಕಾರಿ ಶಾಲೆಗಳನ್ನು ಗುರುತಿಸಿ ಇಂತಹ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲೂ ಶಾಲೆಗೆ ಅಗತ್ಯವಿರುವ ಸೌಕರ್ಯಗಳನ್ನು ನೀಡಲು ಸಹಕರಿಸಿ” ಎಂದು ಕೋರಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಯಮುನಾ ಪೈ, ಊರಿನ ಪ್ರಮುಖರಾದ ನಟರಾಜ್ ಹೆಗಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
