ಸುದ್ದಿ ಕನ್ನಡ ವಾರ್ತೆ
ಚೀನಾ:ಇತ್ತೀಚಿಗೆ ನಡೆದ ಯು-23 ಏಷಿಯನ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪ್ರತಿಭಾವಂತ ಅಥ್ಲೀಟ್ ಶಿವಾಜಿ ಪರಶುರಾಮ ಮಾದಪ್ಪಗೌಡ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಪುರುಷರ 5,000 ಮೀಟರ್ ಹಾಗೂ 10,000 ಮೀಟರ್ ಓಟ ಸ್ಪರ್ಧೆಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಶಿವಾಜಿ ಅವರು ಎರಡು ಬೆಳ್ಳಿ ಪದಕಗಳನ್ನು ಗೆದ್ದು ಭಾರತದ ತ್ರಿವರ್ಣ ಧ್ವಜವನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಹಾರಿಸಿದ್ದಾರೆ.
ಮೂಲತಃ ಹಳಿಯಾಳ ತಾಲೂಕಿನವರಾದ ಶಿವಾಜಿ ಅವರು ಕಾರವಾರದಲ್ಲಿ ವ್ಯಾಸಂಗ ಮಾಡಿದ್ದು, ಆ ಸಮಯದಲ್ಲಿ ಕಾರವಾರದ ಮಾಲಾದೇವಿ ಮೈದಾನದಲ್ಲಿ ಕಠಿಣ ಪರಿಶ್ರಮದಿಂದ ಅಥ್ಲೆಟಿಕ್ಸ್ ಅಭ್ಯಾಸ ನಡೆಸುತ್ತಿದ್ದರು. ಅವರ ನಿರಂತರ ಪರಿಶ್ರಮ ಮತ್ತು ಸಮರ್ಪಣೆಯ ಫಲವಾಗಿ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹೆಮ್ಮೆ ತರುವ ಸಾಧನೆ ಮಾಡಿದ್ದಾರೆ.
ಈ ಸಾಧನೆಗೆ ರಾಜ್ಯದ ವಿವಿಧ ಗಣ್ಯರು, ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಶುಭ ಹಾರೈಸಿದ್ದಾರೆ.
