ಸುದ್ದಿ ಕನ್ನಡ ವಾರ್ತೆ

ಅಂಕೋಲಾ:ತಾಲೂಕಿನ ರಾಷ್ಟ್ರೀಯ ಹೆದ್ದಾರಿ 52ರ ಆಡ್ಲೂರು ಬಳಿ ಜಿಪ್ಸಮ್ ಸಾಗಿಸುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಘಟನೆ ಅಗಸೂರು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

​ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಟ್ರಕ್ ಕೇರಳದಿಂದ ಕೊಪ್ಪಳಕ್ಕೆ ಜಿಪ್ಸಮ್ ಲೋಡ್ ಮಾಡಿಕೊಂಡು ಸಂಚರಿಸುತ್ತಿದ್ದು ಹೆದ್ದಾರಿಯ ಅಡ್ಲೂರು ಗ್ರಾಮವನ್ನು ದಾಟುವಾಗ ಚಾಲಕನ ನಿಯಂತ್ರಣ ತಪ್ಪಿ ವಾಹನ ರಸ್ತೆಯಿಂದ ಹೊರಕ್ಕೆ ಧಾವಿಸಿದೆ.ಬಳಿಕ ಅಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆಯ ತೀವ್ರತೆ ಹೆಚ್ಚಿದ್ದರೂಅದೃಷ್ಟವಶಾತ್ ಚಾಲಕ ಮತ್ತು ಕ್ಲೀನರ್ ಇಬ್ಬರೂ ಯಾವುದೇ ಪ್ರಾಣಾಪಾಯವಿಲ್ಲದೇ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

​ಅಪಘಾತದ ಭರಕ್ಕೆ ಟ್ರಕ್‌ನಲ್ಲಿದ್ದ ಜಿಪ್ಸಮ್ ರಸ್ತೆಯ ಆಸುಪಾಸಿನ ಸುಮಾರು 50 ಮೀಟರ್ ಪ್ರದೇಶದಲ್ಲಿ ಸಂಪೂರ್ಣವಾಗಿ ಚೆಲ್ಲಿಹೋಗಿದೆ. ಇದು ಸ್ಥಳೀಯ ನಿವಾಸಿಗಳಲ್ಲಿ ಪರಿಸರ ಮಾಲಿನ್ಯ ಹಾಗೂ ಸಾರ್ವಜನಿಕ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ. ಜಿಪ್ಸಮ್ ಚೆಲ್ಲಿರುವುದರಿಂದ ಪರಿಸರಕ್ಕೆ ಹಾಗೂ ಸಮೀಪದ ಸಾರ್ವಜನಿಕ ನೀರಿನ ಮೂಲಗಳಿಗೆ ಹಾನಿಯಾಗದಂತೆ ತಡೆಯಲು ಅಧಿಕಾರಿಗಳು ತಕ್ಷಣವೇ ಅದನ್ನು ತೆರವುಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
​ವಿಷಯ ತಿಳಿಯುತ್ತಿದ್ದಂತೆಯೇ ಅಂಕೋಲಾ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.