ಸುದ್ದಿ ಕನ್ನಡ ವಾರ್ತೆ
ಅಂಕೋಲಾ:ತಾಲೂಕಿನ ಹಡಿನೂರಿನ ಹಾಲಕ್ಕಿ ಸಮಾಜದ ರೈತ ಮಹಿಳೆಯಾದ 70 ವರ್ಷದ ತುಳಸಿ ನಾರಾಯಣ ಗೌಡ ಎತ್ತುಗಳ ನೊಗಕ್ಕೆ ನೇಗಿಲು ಕಟ್ಟಿ ಕೃಷಿ ಭೂಮಿ ಉಳುಮೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಮುಂಗಾರು ವಿಳಂಬವಾಗಿ,ಕೃಷಿಕರು ವ್ಯವಸಾಯದ ಚಿಂತೆಯಲ್ಲಿದ್ದಾಗಲೇ ಇದೀಗ ಆರಿದ್ರಾ ಮಳೆ ಉತ್ತಮವಾಗಿ ಸುರಿಯುತ್ತಿದ್ದು ಕೃಷಿ ಭೂಮಿಯತ್ತ ರೈತರು ಮುಖ ಮಾಡುವಂತೆ ಮಾಡಿದೆ.
ಹಡಿನೂರಿನ 70 ವರ್ಷದ ಹಾಲಕ್ಕಿ ಮಹಿಳೆ ತುಳಸಿ ನಾರಾಯಣ ಗೌಡ ಅವರು ನೇಗಿಲು ಹಿಡಿದು ಹೊಲಕ್ಕೆ ಇಳಿದು ಜೋಡೆತ್ತುಗಳ ಸಹಾಯದಿಂದ ಭೂಮಿಯನ್ನು ಹದಗೊಳಿಸುವ ಕೆಲಸ ಮಾಡುತ್ತಿದ್ದು ಈಗಾಗಲೇ ತಮ್ಮ ಪಾಲಿನ ಕೃಷಿ ಭೂಮಿಯಲ್ಲಿ ಬಹುತೇಕ ಉಳುಮೆ ಕಾರ್ಯ ಮುಗಿಸಿದ್ದಾರೆ.
ತಾಲೂಕಿನ ಗ್ರಾಮೀಣ ಭಾಗದಲ್ಲಿ ಜನರು ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದು, ಸಾಕಷ್ಟು ಕಡಿಮೆ ಪ್ರಮಾಣದ ಕೃಷಿ ಭೂಮಿ ಹೊಂದಿರುವ ಇಲ್ಲಿನ ಕೃಷಿಕರು ಕುಟುಂಬ ಸಮೇತ ಕೃಷಿ ಕಾಯಕದಲ್ಲಿ ತೊಡಗುತ್ತಾರೆ. ಆದರೆ, ಗದ್ದೆಯಲ್ಲಿ ಉಳುಮೆ ಕಾರ್ಯ ಸಾಮಾನ್ಯವಾಗಿ ಗಂಡಸರೇ ನಿರ್ವಹಿಸುತ್ತಾರೆ.
ಸುಮಾರು 55 ವರ್ಷಗಳಿಂದ ಉಳುಮೆ ಕೆಲಸದ ಅನುಭವ ಇರುವ ತುಳಸಿ ಗೌಡ ಅವರಿಗೆ ಎತ್ತುಗಳ ಮೇಲೆ ನಿಯಂತ್ರಣ ಸಾಧಿಸಿ ನೇಗಿಲಿನಿಂದ ಮಣ್ಣು ಸಡಿಲುಗೊಳಿಸುವ ಕಲೆ ಕರಗತವಾಗಿದೆ.
ಪತಿಯನ್ನು ಮತ್ತು ಒಬ್ಬ ಮಗನನ್ನು ಕಳೆದುಕೊಂಡಿರುವ ತುಳಸಿ ಗೌಡ, ಇನ್ನೊಬ್ಬ ಮಗ ಮತ್ತು ಸೊಸೆಯಂದಿರ ಜೊತೆ ಸೇರಿ ಕೃಷಿ ಕಾರ್ಯ ನಡೆಸುತ್ತಿದ್ದು ಮುಂಗಾರಿನಲ್ಲಿ ಭತ್ತದ ಬೆಳೆ ಬೆಳೆಯಲು ಗದ್ದೆ ಉಳುವ ಮೂಲಕ ತಯಾರಿ ನಡೆಸುತ್ತಿದ್ದಾರೆ.
ಕೃಷಿ ರೈತರ ಜೀವನ ಕ್ರಮವಾಗಿದ್ದು ಎಷ್ಟೇ ಕಷ್ಟ ಬಂದರೂ ತುತ್ತು ಅನ್ನ ನೀಡುವ ಕೃಷಿಯನ್ನು ಬಿಡಬಾರದು ತಮ್ಮ ತೋಳಿನಲ್ಲಿ ಬಲ ಇರುವವರೆಗೆ ಹೊಲದಲ್ಲಿ ದುಡಿಯುವುದು ಹಡಿನೂರಿನ ತುಳಸಜ್ಜಿಯ ಆಶಯವಾಗಿದೆ.
ಕೃಷಿ ಕೈಹಿಡಿಯುತ್ತಿಲ್ಲ ತುಂಬಾ ಕಷ್ಟ ಎಂದು ಕೃಷಿಭೂಮಿಯನ್ನು ಬಂಜರು ಬಿಡುವವರು ಹೆಚ್ಚುತ್ತಿರುವ ಇಂದಿನ ಕಾಲದಲ್ಲಿ ಒಬ್ಬ ಮಹಿಳೆಯಾಗಿ ನೇಗಿಲು ಹಿಡಿದು ಉಳುವ ಯೋಗಿನಿಯಂತೆ ತೋರುವ ತುಳಸಜ್ಜಿ ಮಾದರಿಯಾಗಿದ್ದಾರೆ.
