ಸುದ್ದಿ ಕನ್ನಡ ವಾರ್ತೆ

ಗಂಗಾವತಿ: ರಂಗಪ್ರಯೋಗ ನಾಟಕಗಳ ಪ್ರದರ್ಶನ ಹಾಗೂ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿದ್ದ ಜೂನಿಯರ್ ಕಾಲೇಜ್ ಮೈದಾನದಲ್ಲಿದ್ದ ಬಯಲು ರಂಗಭೂಮಿ ಇನ್ನು ಮುಂದೆ ನೆನಪು ಮಾತ್ರ.

1990ರ ದಶಕದಲ್ಲಿ ಮಾಜಿ ಸಚಿವ ದಿವಂಗತ ಶ್ರೀರಂಗದೇವರಾಯಲು ಅವರು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಾಟಕ ಪ್ರದರ್ಶನಕ್ಕಾಗಿಯೇ ತಮ್ಮ ವಿಶೇಷ ಅನುದಾನದಲ್ಲಿ ನಿರ್ಮಿಸಿದ್ದ ಬಯಲು ರಂಗ ಮಂದಿರ ಹಲವು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿತ್ತು. ಬಯಲು ರಂಗ ಮಂದಿರವನ್ನು ತೆರವುಗೊಳಿಸಿ, ಕಾಲೇಜು ಚಟುವಟಿಕೆಗಾಗಿ ಸ್ಥಳವನ್ನು ಕೊಡುವಂತೆ ಸರ್ಕಾರಿ ಜೂನಿಯರ್ ಕಾಲೇಜ್ ಪ್ರಾಚಾರ್ಯರು ಮೇಲಿಂದ ಮೇಲೆ ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ ನಗರಸಭೆಯ ಅಧಿಕಾರಿಗಳ ಉಸ್ತುವಾರಿಯಲ್ಲಿ ಜೆಸಿಬಿ ಬೈಲು ರಂಗಮಂದಿರದ ತೆರವು ಕಾರ್ಯಾಚರಣೆ ನಡೆಸಿತು.

 

1990ರ ದಶಕದಲ್ಲಿ ಗಂಗಾವತಿ ನಗರವು ನಾಟಕ ಸಂಸ್ಕೃತಿಕ ಕಾರ್ಯ ಚಟುವಟಿಕೆಗಳಿಗೆ ಪ್ರಸಿದ್ಧಿಯಾಗಿತ್ತು ಕಲಾವಿದರಿಗೆ ಮತ್ತು ಕಾರ್ಯಕ್ರಮ ಆಯೋಜನೆ ಮಾಡುವವರಿಗೆ ಒಂದು ವೇದಿಕೆಯ ಅವಶ್ಯಕತೆ ಇತ್ತು. ಆಗ ಶಾಸಕರಾಗಿದ್ದ ದಿವಂಗತ ಶ್ರೀರಂಗದೇವರಾಯಲು ಅವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಬಯಲು ರಂಗಮಂದಿರವನ್ನು ನಿರ್ಮಿಸಲಾಗಿತ್ತು.
ಬೈಲು ರಂಗಮಂದಿರ ವೇದಿಕೆಯಲ್ಲಿ ‘ನೀನಾಸಂ’ ‘ರಂಗಾಯಣ’ ‘ಶಿವ ಸಂಚಾರ’ ರಂಗಭಾರತಿ ಯಂತಹ ಪ್ರಸಿದ್ದ ರಂಗಪ್ರಯೋಗದ ಸಂಸ್ಥೆಗಳು ಇಲ್ಲಿ ನಾಡಿನ ಖ್ಯಾತ ನಾಮರ ನಾಟಕಗಳನ್ನು ಖ್ಯಾತ ರಂಗಭೂಮಿ ಕಲಾವಿದರು ಪ್ರದರ್ಶನ ಮಾಡಿದ್ದಾರೆ.

ಅಖಿಲ ಭಾರತ 78ನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಂಗಾವತಿಯಲ್ಲಿ ಆಯೋಜನೆಯನ್ನು ಯಶಸ್ವಿಯಾಗಿ ಮಾಡುವ ಮೂಲಕ ಗಂಗಾವತಿಯ ಜನರು ಇಡೀ ನಾಡಿಗೆ ತಮ್ಮ ಸಾಂಸ್ಕೃತಿಕ ಸಾಹಿತ್ಯದ ಆಸಕ್ತಿಯನ್ನು ಪ್ರದರ್ಶನ ಮಾಡಿದ್ದಾರೆ. ಹಲವು ದಶಕಗಳಿಂದ ರಂಗಭೂಮಿ ಮತ್ತು ಸಾಂಸ್ಕೃತಿಯ ಕಾರ್ಯಕ್ರಮ ನಡೆಸಲು ಸುಸಜ್ಜಿತವಾದ ರಂಗಮಂದಿರದ ಅವಶ್ಯಕತೆ ಇದೆ ಎಂದು ಪದೇ ಪದೇ ಹೇಳುತ್ತಿದ್ದಾರೆ.
1990ರಲ್ಲಿ ಶ್ರೀರಂಗದೇವರಾಯಲು ಜೂನಿಯರ್ ಕಾಲೇಜ್ ಮೈದಾನದಲ್ಲಿ ನಿರ್ಮಿಸಿದ್ದ ಬಯಲು ರಂಗ ಮಂದಿರದಲ್ಲಿ ಸಣ್ಣಪುಟ್ಟ ಕಾರ್ಯಕ್ರಮಗಳು ಮತ್ತು ನಾಟಕಗಳನ್ನು ಪ್ರದರ್ಶನ ಮಾಡಲಾಗುತ್ತಿತ್ತು, ಇದೀಗ ರಂಗ ಮಂದಿರವನ್ನು ಬಯಲು ರಂಗಮಂದಿರವನ್ನು ತೆರವು ಮಾಡಿರುವುದರಿಂದ ಮುಂಬರುವ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ಭವನ, ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪಬ್ಲಿಕ್ ಕ್ಲಬ್ ಬಯಲು ವೇದಿಕೆಯಲ್ಲಿ ಕಾರ್ಯಕ್ರಮಗಳನ್ನು ಮತ್ತು ನಾಟಕಗಳನ್ನು ಆಯೋಜನೆ ಮಾಡುವ ಅನಿವಾರ್ಯತೆ ಇದೆ.
ಅಖಿಲ ಭಾರತ 78ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಂತರ ಗಂಗಾವತಿಯಲ್ಲಿ ಪುಸ್ತಕ ಲೋಕಾರ್ಪಣೆ, ಸಾಹಿತ್ಯ ಸಮ್ಮೇಳನದಂತಹ ಕಾರ್ಯಕ್ರಮಗಳು ಮತ್ತು ನಾಟಕ ಪ್ರದರ್ಶನ ಹಾಗೂ ಕರೋಕೆ ಹಾಡುವ ಕಾರ್ಯಕ್ರಮಗಳು,ಸಂಗೀತ ಕಚೇರಿಯಂತಹ ಕಾರ್ಯಕ್ರಮ ಪ್ರತಿ ತಿಂಗಳು 2 ರಿಂದ 3 ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿದ್ದು, ಗಂಗಾವತಿಯಲ್ಲಿ ಪ್ರತ್ಯೇಕವಾಗಿ ಸುಸಜ್ಜಿತವಾದ ಆಸನಗಳುಳ್ಳ ರಂಗಮಂದಿರವನ್ನು ನಿರ್ಮಿಸುವಂತೆ ಸಾಹಿತ್ಯಾಸಕ್ತರು, ಕಲಾವಿದರು ಮತ್ತು ಸಂಗೀತಗಾರರು ಜನ ಪ್ರತಿನಿಧಿಗಳಲ್ಲಿ ಪ್ರತಿ ಕಾರ್ಯಕ್ರಮದಲ್ಲಿಯೂ ಮನವಿ ಮಾಡುತ್ತಾರೆ.
ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಗಂಗಾವತಿ ನಗರದಲ್ಲಿ ಸುಸಜ್ಜಿತವಾದ ರಂಗಮಂದಿರವನ್ನು ನಿರ್ಮಿಸುವ ಅವಶ್ಯಕತೆ ಇದೆ.

ಬಯಲು ರಂಗ ಮಂದಿರ ತೆರವು ಮಾಡುವ ಸ್ಥಳದಲ್ಲಿ ಗಂಗಾವತಿ ನಗರದ ಪ್ರಮುಖವಾಗಿ ಬಸ್ ನಿಲ್ದಾಣದ ಸುತ್ತಮುತ್ತಲು ಬೀದಿಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ತಳ್ಳುಬಂಡಿಗಳಿಗೆ ಸ್ಥಳ ನಿಗದಿ ಮಾಡುವ ಸಾಧ್ಯತೆ ಇದೆ.

ಇನ್ನು ನಗರದಲ್ಲಿ ಬಾಡಿಗೆ ಕಾರುಗಳು ಮತ್ತು ಸಣ್ಣಪುಟ್ಟ ವಾಹನಗಳನ್ನು ಇಟ್ಟುಕೊಂಡು ಜೀವನ ನಡೆಸುವವರು ತಮ್ಮ ವಾಹನಗಳನ್ನು ಬಯಲು ರಂಗಮಂದಿರದ ಮುಂಭಾಗದಲ್ಲಿ ಬಿಡುತ್ತಿದ್ದರು. ಬೀದಿಬದಿ ವ್ಯಾಪಾರಿಗಳಿಗೆ ಇಲ್ಲಿ ಸ್ಥಳಾವಕಾಶ ಮಾಡಿಕೊಟ್ಟರೆ ಟ್ಯಾಕ್ಸಿ ಸ್ಟಾಂಡ್ ಪ್ರತ್ಯೇಕವಾಗಿ ಗಂಗಾವತಿ ನಗರದ ಯಾವುದಾದರೂ ಸ್ಥಳದಲ್ಲಿ ಕೊಡುವಂತೆ ಬಾಡಿಗೆ ಕಾರು ಗಳನ್ನು ಓಡಿಸುವ ಚಾಲಕರು ಮತ್ತು ಮಾಲೀಕರು ನಗರಸಭೆ ಪೌರಾಯುಕ್ತರಲ್ಲಿ ಮನವಿ ಮಾಡಿದ್ದಾರೆ.