ಸುದ್ದಿ ಕನ್ನಡ ವಾರ್ತೆ
ಶಿರಸಿ: ಸಿದ್ದಗಂಗಾ ಮಠದ ಶ್ರೀಗಳ ಸಮಾಜಮುಖಿ ಕೆಲಸಗಳಿಂದ ಪ್ರೇರಣೆಯಾಗಿ ನಾನು ಕೂಡಾ ಸಮಾಜಮುಖಿ ಚಟುವಟಿಕೆಯನ್ನು ಮಾಡುತ್ತಿದ್ದೇನೆೆ ಎಂದು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ ಅಧ್ಯಕ್ಷರಾದ ಅನಂತಮೂರ್ತಿ ಹೆಗಡೆ ಅವರು ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಬದನಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂತೊಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿ, ಘಟಕವನ್ನು ಉದ್ಘಾಟಿಸಿ, ಮಾತನಾಡಿದರು. ಸಿದ್ದಗಂಗಾ ಮಠದ ಶ್ರೀಗಳು ಅನ್ನ, ಅಕ್ಷರ, ಆಶ್ರಯ ಚಿಂತನೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ವಸತಿ ಸಹಿತ ಶಿಕ್ಷಣ ನೀಡಿದ್ದಾರೆ. ದೇಶವು ಹಾಳಾಗುತ್ತಿರುವುದು ಜಾತಿ ವವಸ್ಥೆಯಿಂದ, ಸಿದ್ದಗಂಗಾ ಮಠದ ಶಿಕ್ಷಣ ಸಂಸ್ಥೆಯಲ್ಲಿ ಜಾತಿ ವ್ಯವಸ್ಥೆಯಿಲ್ಲ, ಅಲ್ಲಿ ಶಿಕ್ಷಕ, ಕಲಿತ ವಿದ್ಯಾರ್ಥಿಗಳು ದೇಶದಲ್ಲಿ ಉತ್ತಮವಾಗಿ ಸಾಧನೆ ಮಾಡಿದ್ದಾರೆ, ಅವರ ಸಮಾಜಸೇವೆಗಳು ನಮಗೆ ದಾರಿದೀಪವಾಗಿದೆ ಎಂದ ಅವರು, ಇಂದಿನ ಮಕ್ಕಳು ಬಾಲ್ಯದಲ್ಲಿಯೇ ಉತ್ತಮ ಆರೋಗ್ಯವನ್ನು ಹೊಂದಿದ್ದರೆ ಮಾತ್ರ ಭವಿಷ್ಯದಲ್ಲಿ ದೇಶದ ಅತ್ಯಮೂಲ್ಯ ಸಂಪತ್ತಾಗಿ ಬೆಳೆದು, ದೊಡ್ಡಸಾಧನೆಗಳನ್ನು ಮಾಡಲು ಸಾಧ್ಯ “ಮಕ್ಕಳ ಆರೋಗ್ಯದ ಕಾಳಜಿಯ ದೃಷ್ಟಿಯಿಂದ ನಮ್ಮ ಟ್ರಸ್ಟ್ ವತಿಯಿಂದ ಈಗಾಗಲೇ ಜಿಲ್ಲೆಯ ೧೫೦ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರಿನ ಫಿಲ್ಟರ್ ವಿತರಿಸಿದ್ದೇವೆ. ಕೇವಲ ಶೈಕ್ಷಣಿಕ ಕ್ಷೇತ್ರ ಮಾತ್ರವಲ್ಲದೆ ಬಸ್ ನಿಲ್ದಾಣ, ಆಸ್ಪತ್ರೆ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಿಗೂ ನಮ್ಮಿಂದಾಗುವ ಸಹಾಯ, ಸಹಕಾರವನ್ನು ಮಾಡುತ್ತಾ ಬರಲಾಗಿದೆ,” ಎಂದರು.
“ನಮ್ಮ ಈ ಸಮಾಜಮುಖಿ ಕೆಲಸಕ್ಕೆ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳು ಪ್ರೇರಣೆಯಾಗಿದ್ದಾರೆ. ಅವರು ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ವಸತಿ ಸಹಿತ ಶಿಕ್ಷಣ ನೀಡಿದ್ದಾರೆ. ಹಾಗೆಯೇ ಕರ್ನಾಟಕದ ಹೆಮ್ಮೆಯ ನಟ ದಿವಂಗತ ಪುನೀತ್ ರಾಜಕುಮಾರ್ ಅವರು ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಸದಾ ಒಳ್ಳೆಯದನ್ನೇ ಮಾಡುತ್ತಾ, ಕನಿಷ್ಠ ನಾಲ್ಕು ಜನರಿಗೆ ಸಹಾಯವಾಗುವಂತೆ ಬದುಕಬೇಕು ಎನ್ನುವ ಅದ್ಭುತ ಮಾರ್ಗದರ್ಶನ ನೀಡಿ ಹೋಗಿದ್ದಾರೆ. ಅವರ ಆದರ್ಶ ತತ್ವಗಳೇ ನಾವೆಲ್ಲರೂ ಇಂತಹ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಪ್ರೇರಣೆಯಾಗಿದೆ,” ಈ ಊರಿನ ಅಭಿವೃದ್ಧಿ ನಿಟ್ಟಿನಲ್ಲಿ ಈ ಭಾಗದ ಮುಖಂಡರಾದ ಯುವರಾಜ್ ಗೌಡ, ಸಾಕಷ್ಟು ಶ್ರಮಿಸುತ್ತಿದ್ದಾರೆ, ಪ್ರತಿ ಊರಿನಲ್ಲಿ , ಇಂತಹ ನಾಯಕತ್ವದ ಗುಣ ಇರುವ ವ್ಯಕ್ತಿಗಳು ಇರಬೇಕು ಎಂದು ಅನಂತಮೂರ್ತಿ ಹೆಗಡೆ ಹೇಳಿದರು.
ಗ್ರಾಮಸ್ಥರಾದ ಯುವರಾಜ್ ಗೌಡ, ಮಾತನಾಡಿ, “ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲೆಯನ್ನು ಗುರುತಿಸಿ, ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಟ್ಟಿರುವುದು ಶ್ಲಾಘನೀಯ. ಅವರಿಗೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಮಾಜಮುಖಿ ಕೆಲಸಗಳನ್ನು ಮಾಡಲು ಶಕ್ತಿ ಸಿಗಲಿ,” ಶುಭ ಹಾರೈಸಿದರು.
ಶಾಲೆಗೆ ಅತ್ಯಾಧುನಿಕ ವಾಟರ್ ಫಿಲ್ಟರ್ ಅನ್ನು ಕೊಡುಗೆಯಾಗಿ ನೀಡಿದ ಹಿನ್ನೆಲೆಯಲ್ಲಿ ಅನಂತಮೂರ್ತಿ ಹೆಗಡೆ ಅವರನ್ನು ಶಾಲೆಯ ಎಸ್.ಡಿ. ಸಿ ಪದಾಧಿಕಾರಿಗಳು ಹಾಗೂ ಸಮಸ್ತ ಗ್ರಾಮಸ್ಥರ ವತಿಯಿಂದ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಆಯೋಗದ ಕಾರ್ಯದರ್ಶಿಯಾದ ಮಾರುತಿ ಎನ್ ಸಾಳುಂಕೆ ಶಾಲೆಯ ಎಸ್.ಎಂ.ಸಿ ಅಧ್ಯಕ್ಷರಾದ ರವಿ ಬೋರಳ್ಳಿ, ಬದನಗೋಡು ಗ್ರಾಮ ಪಂಚಾಯತಿ ಪಿಡಿಓ ಟಿ.ಪಿ. ಲಂಬಾಣಿ, ಶಿವಪ್ಪ ದುರ್ಗಪ್ಪ ಬೋವಿವಡ್ಡರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
