ಸುದ್ದಿ ಕನ್ನಡ ವಾರ್ತೆ
ದಿನಾಂಕ 9 ಜುಲೈ 2026 ರಂದು ಉತ್ತರ ಕನ್ನಡ ಸಾವಯವ ಒಕ್ಕೂಟ ಹಾಗೂ ಕೃಷಿ ಪ್ರಯೋಗ ಪರಿವಾರ, ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಸಾಂಪ್ರದಾಯಿಕ ಭತ್ತದ ತಳಿ ಉಳಿಸಿ ಬೆಳೆಸುವ ಕುರಿತಾಗಿ ಚಿಂತನ ಮಂಥನ ಕಾರ್ಯಕ್ರಮವನ್ನು ಉತ್ತರ ಕನ್ನಡ ಸಾವಯವ ಒಕ್ಕೂಟದ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
2028 ಕ್ಕೆ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಸೋದೆ ಶ್ರೀ ವಾದಿರಾಜ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ಪರ್ಯಾಯವನ್ನು ನೆರವೇರಿಸಲಿದ್ದಾರೆ. ಇದಕ್ಕೆ ಪೂರಕವಾಗಿ ಶುದ್ಧ ನೈವೇದ್ಯ ಸಮರ್ಪಣಂ ಎಂಬ ವಿಶಿಷ್ಟ ಸಾಂಪ್ರದಾಯಿಕ ಭತ್ತದ ತಳಿಯನ್ನು ಉಳಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅನ್ನ ಬ್ರಹ್ಮ ಉಡುಪಿ ಶ್ರೀ ಕೃಷ್ಣನಿಗೆ ಪ್ರತಿದಿನ ದಿನಕ್ಕೊಂದು ಸಾಂಪ್ರದಾಯಿಕ ಭತ್ತದ ತಳಿಯ ನೈವೇದ್ಯವನ್ನು ಸಮರ್ಪಿಸಬೇಕು, ಜೊತೆಗೆ ತಳಿ ಸಂರಕ್ಷಣೆ ಆಗಬೇಕು, ಸಾವಯವ ಕೃಷಿಯಲ್ಲಿ ಭತ್ತವನ್ನು ಬೆಳೆಯಬೇಕು ಎಂಬುದು ಈ ಅಭಿಯಾನದ ಉದ್ದೇಶವಾಗಿದೆ.
ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತ ಭತ್ತ ಬೆಳೆಯುವ ರೈತರು ಈ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಕೋರುತ್ತೇವೆ.
ಆಸಕ್ತರು ಹೆಸರು ನೋಂದಾಯಿಸಬಹುದು 8660553054
