ಸುದ್ದಿ ಕನ್ನಡ ವಾರ್ತೆ
ಜೋಯಿಡಾ :ಒಂದು ಕನ್ನಡ ಶಾಲೆ ಮುಚ್ಚಿದರೆ ಅಲ್ಲಿ ಸ್ವಾತಂತ್ರೋತ್ಸವ ನಡೆಯುವುದಿಲ್ಲ, ಸ್ವಚ್ಛತಾ ಕಾರ್ಯಕ್ರಮ, ವನಮಹೋತ್ಸವ, ರಾಷ್ಟ್ರೀಯ ಕಾರ್ಯಕ್ರಮ ಯಾವುದೂ ನಡೆಯುವುದಿಲ್ಲ. ಕನ್ನಡ ರಾಜ್ಯೋತ್ಸವ ನಡೆಯುವುದಿಲ್ಲ. ಕನ್ನಡ ಶಾಲೆ ಮುಚ್ಚಿದರೆ ಆ ಊರಿನ ಸಂಸ್ಕೃತಿ ನಾಶವಾದಂತೆ, ಸಂಸ್ಕೃತಿ ನಾಶವಾದರೆ ಊರಿನ ಅಸ್ತಿತ್ವ ಕಳೆದುಕೊಂಡಂತೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್. ವಾಸರೆ ಹೇಳಿದರು.
ಅವರು ತಾಲೂಕಿನ ಬಾಪೇಲಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಜೋಯಿಡಾ ವತಿಯಿಂದ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡಕ್ಕೆ ನೂರಕ್ಕೆ ನೂರು ಅಂಕ ಪಡೆದ ೧೭ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಶಾಲೆಗಳನ್ನು ಉಳಿಸುವ ಕೆಲಸ ಸರ್ಕಾರ, ಇಲಾಖೆಗಳು ಮಾಡಬೇಕಿದೆ. ಕನ್ನಡದಲ್ಲಿ ಪ್ರತಿಭೆ ತೋರಿದ ಮಕ್ಕಳಿಗೆ ಸರ್ಕಾರ, ಇಲಾಖೆ ಕನಿಷ್ಠ ಅಭಿನಂದನಾ ಪಾತ್ರವನ್ನಾದರೂ ನೀಡಿ ಪ್ರೋತ್ಸಾಹಿಸಬೇಕಿದೆ. ಮಕ್ಕಳಲ್ಲಿ ಕನ್ನಡ ಜಾಗೃತಿ ಬೀಜ ಬಿತ್ತಬೇಕೆನ್ನುವ ಕಾರಣಕ್ಕಾಗಿ ಈ ಅಭಿನಂದನಾ ಕಾರ್ಯಕ್ರಮ ಮಾಡುತ್ತಿದ್ದೇವೆ ಹೋರತು ಯಾವುದೆ ಲಾಭಕ್ಕಾಗಿ ಅಲ್ಲ. ಇಂದು ಅಭಿನಂದನೆ ಪಡೆದವರು ಮುಂದೆ ಸಾಧನೆ ಮಾಡಿ ಬಂದಮೇಲೆ ಕನ್ನಡ ಸಾಹಿತ್ಯ ಪರಿಷತ್ತನ್ನು ನೆನೆಸಿಕೊಂಡರೆ ಅದೇ ನಮ್ಮ ಶ್ರಮಕ್ಕೆ ಸಾರ್ಥಕತೆ ಸಿಕ್ಕಂತೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಣ ಅಧಿಕಾರಿ ಎನ್.ಭಾರತಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಕಾರ್ಯಕ್ರಮಗಳ ಮೂಲಕ ಕನ್ನಡ ಜಾಗೃತಿ ಮೂಡಿಸುತ್ತಿರುವುದು ಹೆಮ್ಮೆಯ ಸಂಗತಿ. ನಾಡು ನುಡಿ, ಕನ್ನಡ ಪ್ರೀತಿ ಮಕ್ಕಳಲ್ಲಿ ಬೆಳೆಸುವ. ಕನ್ನಡ ಕಾರ್ಯಕ್ರಮಗ ಶ್ಲಾಘನೀಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಶೀರ್ ಅಹಮದ್ ಶೇಖ್ ಮಾತನಾಡಿ, ಜೋಯಿಡಾ ತಾಲೂಕು ಆಂಗ್ಲಮಾಧ್ಯಮದಿಂದ ದೂರ ಉಳಿದು ಕನ್ನಡವನ್ನೇ ಒಪ್ಪಿಕೊಂಡಿರುವ ತಾಲೂಕು. ಇಲ್ಲಿ ಕನ್ನಡಕ್ಕೆ ಪ್ರಥಮ ಆಧ್ಯತೆ ಇದೆ ಎಂದರು.
ನಾಲ್ಕನೇ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವಾಧ್ಯಕ್ಷರಾದ ಸುಕನ್ಯಾ ದೇಸಾಯಿ ಮಾತನಾಡುತ್ತಾ, ಕನ್ನಡ ನೆಲ,ಜಲ, ಭಾಷೆ ಬಗ್ಗೆ ನಮಗೆ ಅಭಿಮಾನ ಇರಬೇಕು. ಕನ್ನಡವನ್ನು ಕಟ್ಟಿ ಬೆಳೆಸುವ ಕಾರ್ಯ ಮುಂದಿನ ದಿನಗಳಲ್ಲಿ ನಿಮ್ಮಿಂದ ಆಗಬೇಕಿದೆ ಎಂದು ಹೇಳಿದರು.
ಪ್ರಮುಖರಾದ ಸಾಹಿತಿ ಅಂತೋನಿ ಜಾನ್, ಜಿಲ್ಲಾ ಸಮಿತಿ ಸದಸ್ಯೆ ಸಾಹಿತಿ ಸೀತಾ ದಾನಗೇರಿ, ಶ್ರೀಧರ್ ದಬಗಾರ, ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯ್ಕ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಸುಭಾಷ ನಾಯ್ಕ, ಎಸ್.ಡಿ.ಎಮ್.ಸಿ.ಅಧ್ಯಕ್ಷ ಮೋಹನ ಮಾವಸ್ಕರ, ಮುಂತಾದವರು ಮಾತನಾಡಿದರು.
. ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಮಾಜಿ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.
ಕ.ಸಾ.ಪ. ಅಧ್ಯಕ್ಷ ಪಾಂಡುರಂಗ ಪಟಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ಕಾರ್ಯದರ್ಶಿಗಳಾದ ಭಾಸ್ಕರ ಗಾಂವ್ಕರ್ ಸ್ವಾಗತಿಸಿದರು. ಪ್ರೇಮಾನಂದ ವೇಳಿಪ ಸಂಘಟಿಸಿದರು. ಶಿಕ್ಷಕ ಶ್ರೀಕಾಂತ ಚಲವಾದಿ ವಂದಿಸಿದರು. ತಾಲೂಕಿನ ಒಟ್ಟು 17 ವಿದ್ಯಾರ್ಥಿಗಳಿಗೆ ನೋಟ್ಬುಕ್, ಸಾಹಿತ್ಯ ಪುಸ್ತಕ ಜೋತೆ ಚ್ಯೆನ್ ಫೈಲ್, ಕನ್ನಡ ಶಾಲು ಹಾಕಿ ಸನ್ಮಾನಿಸಿ ಅಭಿನಂದಿಸಲಾಯಿತು.
