Banner Ad

ಸುದ್ದಿ ಕನ್ನಡ ವಾರ್ತೆ
​ಶಿರಸಿ: ಯಾವುದೇ ಕಳ್ಳತನವಿಲ್ಲದೆ, ಸಂಪೂರ್ಣ ಕಾನೂನುಬದ್ಧ ದಾಖಲೆಗಳೊಂದಿಗೆ ಸಾಗಿಸಲಾಗುತ್ತಿದ್ದ ಅಡಿಕೆ ತುಂಬಿದ ಲಾರಿಗಳನ್ನು ಮಹಾರಾಷ್ಟ್ರದಲ್ಲಿ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆಯ ನೆಪದಲ್ಲಿ ತನಿಖೆಗೆ ಒಳಪಡಿಸಿ ವಶಪಡಿಸಿಕೊಂಡಿರುವುದು ಅಸಮಂಜಸ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕಾರಿಗಳ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

​ಉತ್ತರ ಕನ್ನಡ, ಶಿವಮೊಗ್ಗ, ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಅಡಿಕೆ ವ್ಯಾಪಾರಸ್ಥರು ಉತ್ತರ ಭಾರತ ಹಾಗೂ ದೇಶದ ಅನೇಕ ರಾಜ್ಯಗಳಿಗೆ ನಿರಂತರವಾಗಿ ವ್ಯಾಪಾರಕ್ಕಾಗಿ ಅಡಿಕೆಯನ್ನು ಕಳುಹಿಸುತ್ತಲೇ ಬಂದಿದ್ದಾರೆ. ಇದರಿಂದ ಇದುವರೆಗೆ ಯಾರಿಗೂ ಯಾವುದೇ ತೊಂದರೆಯಾಗಿರುವುದಿಲ್ಲ. ಆದರೆ, ಪ್ರಸ್ತುತ ಅಧಿಕಾರಿಗಳು ಕಾನೂನನ್ನು ದುರ್ಬಳಕೆ ಮಾಡಿಕೊಂಡು, ಕೇವಲ ತಾಂತ್ರಿಕ ನೆಪ ಮತ್ತು ಶಂಕೆಯ ಆಧಾರದ ಮೇಲೆ ಮಲೆನಾಡಿನ ಅಡಿಕೆ ಲಾರಿಗಳನ್ನು ತಡೆಹಿಡಿದು ಜಪ್ತಿ ಮಾಡಿರುವುದು ಬೇಸರದ ಸಂಗತಿ.​ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಇಂಡೋನೇಷ್ಯಾ, ಮ್ಯಾನ್ಮಾರ್ ಸೇರಿದಂತೆ ಇತರ ದೇಶಗಳಿಂದ ಕಾನೂನುಬಾಹಿರವಾಗಿ ಸರಬರಾಜಾಗುತ್ತಿದ್ದ ಕಳಪೆ ಮಟ್ಟದ ಅಂತರರಾಷ್ಟ್ರೀಯ ಅಡಿಕೆ ಕಳ್ಳಸಾಗಣೆ ಜಾಲವನ್ನು ಕಸ್ಟಮ್ಸ್ ಮತ್ತು ಡಿ.ಆರ್.ಐ (DRI) ಅಧಿಕಾರಿಗಳು ಪತ್ತೆ ಹಚ್ಚಿದ್ದರು.

Banner Ad

​ಈ ಅಕ್ರಮ ಕಳ್ಳಸಾಗಣೆಗೆ ಸಂಪೂರ್ಣ ಬ್ರೇಕ್ ಹಾಕಲು ಮಹಾರಾಷ್ಟ್ರ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಇದು ನಮ್ಮ ಭಾಗದ ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ತುಸು ನೆಮ್ಮದಿ ನೀಡಿತ್ತು. ಆದರೆ, ಇದರ ಬೆನ್ನಲ್ಲೇ ಈಗ ಸ್ಥಳೀಯ ಮತ್ತು ಕಾನೂನುಬದ್ಧ ವ್ಯಾಪಾರಿಗಳ ಲಾರಿಗಳನ್ನು ತಡೆಹಿಡಿದಿರುವುದು ಸೂಕ್ತವಲ್ಲದ ಕ್ರಮವಾಗಿದೆ ಇದರಿಂದ ರೈತರಲ್ಲಿ ಆತಂಕ ಮೂಡಿಸಿದೆ.
​ಈ ಕುರಿತು ಈಗಾಗಲೇ ಅನೇಕ ಅಡಿಕೆ ಸಂಘ–ಸಂಸ್ಥೆಗಳು ಮತ್ತು ಲಾರಿ ಮಾಲೀಕರು ಮಾಹಿತಿಯನ್ನು ನೀಡಿದ್ದು, ಸಮಸ್ಯೆಯನ್ನು ತಕ್ಷಣವೇ ಕೇಂದ್ರ ಮಂತ್ರಿಗಳು, ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗಿದೆ. ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರು, ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳು ಈ ವಿಷಯದ ಕಡೆಗೆ ತಕ್ಷಣವೇ ಗಮನಹರಿಸಿದ್ದು, ಸಮಸ್ಯೆಯನ್ನು ಶೀಘ್ರದಲ್ಲೇ ಇತ್ಯರ್ಥಗೊಳಿಸುವುದಾಗಿ ಸಕಾರಾತ್ಮಕ ಭರವಸೆ ನೀಡಿದ್ದಾರೆ.​ಈ ಬಿಕ್ಕಟ್ಟು ಶೀಘ್ರದಲ್ಲೇ ಸುಖಾಂತ್ಯ ಕಾಣಲಿದ್ದು, ವ್ಯಾಪಾರಸ್ಥರು ಮತ್ತು ರೈತರು ಆತಂಕ ಪಡುವ ಅಗತ್ಯವಿಲ್ಲ ​ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Banner Ad