ಸುದ್ದಿ ಕನ್ನಡ ವಾರ್ತೆ

. ಜೋಯಿಡಾ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕರಂಜೋಯಿಡಾ ಗ್ರಾಮದ ಖಾನಗಾಂವ ಗ್ರಾಮದಲ್ಲಿ ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದ ಕಾರಣ ಗ್ರಾಮಸ್ಥರು ಹಾಗೂ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದ ವರ್ಷ ಇದೇ ವೇಳೆಗೆ ನಿರಂತರ ಮಳೆಯಿಂದ ಗ್ರಾಮದ ಸುತ್ತಮುತ್ತಲಿನ ಹಳ್ಳಗಳು ತುಂಬಿ ಹರಿಯುತ್ತಿದ್ದವು. ಆದರೆ ಈ ವರ್ಷ ಇನ್ನೂ ಸಮರ್ಪಕ ಮಳೆಯಾಗದ ಕಾರಣ ಹಳ್ಳಗಳಲ್ಲಿ ನೀರು ಕಾಣಿಸುತ್ತಿಲ್ಲ. ಇದರಿಂದ ಕೃಷಿ ಚಟುವಟಿಕೆಗಳು ವಿಳಂಬವಾಗಿದ್ದು, ರೈತರು ಮಳೆಗಾಗಿ ಎದುರು ನೋಡುತ್ತಿದ್ದಾರೆ. ಮಳೆಯ ಕೊರತೆಯಿಂದ ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗುವ ಆತಂಕವೂ ವ್ಯಕ್ತವಾಗಿದ್ದು, ಪರಿಸರದಲ್ಲಿ ಬೇಸಿಗೆಯ ವಾತಾವರಣ ಇನ್ನೂ ಮುಂದುವರಿದಿದೆ. ಶೀಘ್ರದಲ್ಲೇ ಉತ್ತಮ ಮಳೆಯಾಗಿ ಹಳ್ಳಗಳು, ಕೆರೆಗಳು ಹಾಗೂ ಜಲಮೂಲಗಳು ತುಂಬಿ ಕೃಷಿ ಚಟುವಟಿಕೆಗಳು ಆರಂಭವಾಗಲಿ ಎಂದು ಗ್ರಾಮಸ್ಥರು ಆಶಿಸುತ್ತಿದ್ದಾರೆ.