ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ರಾಮನಗರ ಪಂಚಾಯತದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹನುಮಾನಲೇನ್ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ಉತ್ಸಾಹ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಯೋಗದ ಬಗ್ಗೆ ತಮ್ಮ ಆಸಕ್ತಿಯನ್ನು ಪ್ರದರ್ಶಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಯೋಗದ ಮಹತ್ವ ಹಾಗೂ ಅದರ ಆರೋಗ್ಯಕರ ಪ್ರಯೋಜನಗಳ ಕುರಿತು ಮಾಹಿತಿ ಶಾಲೆಯ ಸಹ ಶಿಕ್ಷಕಿಯಾದ ನಾಗರತ್ನಾ ಮೊಗೇರ ನೀಡಿದರು. ಬಳಿಕ ವಿದ್ಯಾರ್ಥಿಗಳು ವಿವಿಧ ಯೋಗಾಸನಗಳು ಮತ್ತು ಪ್ರಾಣಾಯಾಮಗಳನ್ನು ಪ್ರದರ್ಶಿಸಿದರು. ಯೋಗಾಭ್ಯಾಸದ ವೇಳೆ ವಿದ್ಯಾರ್ಥಿಗಳು ಶಿಸ್ತು, ಏಕಾಗ್ರತೆ ಹಾಗೂ ಉತ್ಸಾಹವನ್ನು ಮೆರೆದರು.
ನಿಯಮಿತ ಯೋಗಾಭ್ಯಾಸವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಒತ್ತಡವನ್ನು ಕಡಿಮೆ ಮಾಡಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಯೋಗದ ಮಹತ್ವದ ಬಗ್ಗೆ ಅರಿವು ಮೂಡಿಸಿ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡುತ್ತದೆ ಎಂದು ಹೇಳಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕರಾದ ಮಂಜುನಾಥ ಕೊಟಬಾಗಿಯವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಅವರು ಯೋಗದ ಅತ್ಯಂತ ದೊಡ್ಡ ವಿಶೇಷತೆ ಎಂದರೆ ಅದು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವುದು. ದುಬಾರಿ ಉಪಕರಣಗಳ ಅಗತ್ಯವಿಲ್ಲ ವಿಶೇಷ ಸ್ಥಳವೂ ಬೇಕಾಗಿಲ್ಲ.ಪ್ರತಿದಿನ ಸ್ವಲ್ಪ ಸಮಯ ಮೀಸಲಿಟ್ಟರೆ ಸಾಕು. ವಯಸ್ಸು, ಲಿಂಗ, ಆರ್ಥಿಕ ಸ್ಥಿತಿ ಅಥವಾ ಸಾಮಾಜಿಕ ಹಿನ್ನೆಲೆಯ ಯಾವುದೇ ಮಿತಿಯಿಲ್ಲದೆ ಪ್ರತಿಯೊಬ್ಬರೂ ಯೋಗವನ್ನು ಅಳವಡಿಸಿಕೊಳ್ಳಬಹುದು.
ಯೋಗವು ಕೇವಲ ರೋಗ ನಿವಾರಣೆಯ ಸಾಧನವಲ್ಲ; ಅದು ಜೀವನವನ್ನು ಸಮತೋಲನಗೊಳಿಸುವ ಮನಸ್ಸಿಗೆ ಶಾಂತಿ ನೀಡುವ ಮತ್ತು ಆರೋಗ್ಯಕರ ಮುಪ್ಪಿನತ್ತ ಕೊಂಡೊಯ್ಯುವ ಮಾರ್ಗವಾಗಿದೆ. ಆದ್ದರಿಂದ ಈ ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಯೋಗವನ್ನು ಜೀವನಶೈಲಿಯಾಗಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡೋಣ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕರಾದ ಬಿ. ಹೆಚ್ ಬಾಗವಾನ ಯೋಗಕ್ಕೆ ಅದರದ್ದೇ ಇತಿಹಾಸವಿದ್ದು,ನಿರಂತರ ಯೋಗ,ಸುಖಕರ ಜೀವನಕ್ಕೆ ಶಕ್ತಿ,ವಿಶ್ವ ಯೋಗ ದಿನಾಚರಣೆಯ ಉದ್ದೇಶ, ಅದರ ಮಹತ್ವ,ಅಂತಾರಾಷ್ಟ್ರೀಯ ಯೋಗ ದಿನವು ಇಂದು ವಿಶ್ವಾದ್ಯಂತ ಆರೋಗ್ಯ ಮತ್ತು ಜೀವನಶೈಲಿಯ ಹಬ್ಬವಾಗಿ ಆಚರಣೆಯಾಗುತ್ತಿದೆ. 2015ರಿಂದ ಆರಂಭವಾದ ಈ ಆಚರಣೆ, ಭಾರತದ ಪ್ರಾಚೀನ ಯೋಗ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದರ ಜೊತೆಗೆ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಮಹತ್ವವನ್ನು ಸಾರುತ್ತಿದೆ. 2026ರ ಅಂತಾರಾಷ್ಟ್ರೀಯ ಯೋಗದಿನದ ಧೈಯವಾಕ್ಯ ಆರೋಗ್ಯಕರ ವಯಸ್ಸಾಗುವಿಕೆಗಾಗಿ ಯೋಗ.
ಹೀಗಾಗಿ ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ ಅದು ದೇಹ, ಮನಸ್ಸು ಮತ್ತು ಅತ್ಮದ ನಡುವೆ ಸಮನ್ವಯ ಸಾಧಿಸುವ ಸಮಗ್ರ ಜೀವನ ಪದ್ಧತಿಯಾಗಿದೆ.
ಅಂತಾರಾಷ್ಟ್ರೀಯ ಯೋಗ ದಿನವು ಕೇವಲ ಒಂದು ದಿನದ ಕಾರ್ಯಕ್ರಮವಾಗಿ ಉಳಿಯಬಾರದು. ಯೋಗವನ್ನು ದೈನಂದಿನ ಜೀವನದ ಭಾಗವನ್ನಾಗಿ ಮಾಡಿಕೊಳ್ಳುವುದು ಮುಖ್ಯ. ಆರೋಗ್ಯವಂತ ವ್ಯಕ್ತಿಗಳಿಂದಲೇ ಆರೋಗ್ಯಕರ ಕುಟುಂಬ ಮತ್ತು ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರಾಮನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಇಮಾಂಬಿ ಬಿಸ್ತಿ,ಆರೋಗ್ಯ ಸಹಾಯಕಿ ಭಾಗ್ಯಶ್ರೀ ದೊಡದನ್ನವರ, ಸಾಧನಾ ಫನಿಕರ ಆಶಾ ಕಾರ್ಯಕರ್ತೆ ಅವರು ವಯಸ್ಸು ಹೆಚ್ಚಾದಂತೆ ದೇಹದಲ್ಲಿ ಸಹಜ ಬದಲಾವಣೆಗಳು ಆರಂಭವಾಗುತ್ತವೆ. ಕೀಲು ನೋವು, ದೈಹಿಕ ದುರ್ಬಲತೆ, ರಕ್ತದೊತ್ತಡ, ಮಧುಮೇಹ, ನಿದ್ರಾಹೀನತೆ, ನೆನಪಿನ ಸಮಸ್ಯೆ ಹಾಗೂ ಏಕಾಂಗಿತನದಂತಹ ತೊಂದರೆಗಳು ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ಯೋಗವು ಅತ್ಯಂತ ಪರಿಣಾಮಕಾರಿ ಸಹಾಯಕ ಮಾರ್ಗವಾಗಿದೆ.
​ನಿಯಮಿತ ಯೋಗಾಭ್ಯಾಸದಿಂದ ದೇಹದ ನಮ್ಯತೆ ಮತ್ತು ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಸ್ನಾಯುಗಳು ಬಲಗೊಳ್ಳುತ್ತವೆ. ಉಸಿರಾಟದ ಸಾಮರ್ಥ್ಯ ಹೆಚ್ಚುತ್ತದೆ. ಮನಸ್ಸು ಶಾಂತವಾಗಿ, ಆತಂಕ ಮತ್ತು ಒತ್ತಡ ಕಡಿಮೆಯಾಗುತ್ತದೆ. ವಯಸ್ಸಾದವರಲ್ಲಿ ಕಂಡುಬರುವ ಖಿನ್ನತೆ ಮತ್ತು ಏಕಾಂಗಿತನವನ್ನು ದೂರ ಮಾಡುವಲ್ಲಿಯೂ ಯೋಗ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಶಾಲೆಯ ಸಹ ಶಿಕ್ಷಕಿಯರಾದ ಅನಿಸ್ ಫಾತಿಮಾ,ಸುನಿತಾ ಆರ್,ಸಂಜನಾ ಮಿರಾಶಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಹಕಾರ ನೀಡಿದರು.