ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಬಾಗಾ ಬೀಚ್‍ನಲ್ಲಿ ಮುಳುಗುತ್ತಿದ್ದ ಕರ್ನಾಟಕದ ನಾಲ್ವರು ದೃಷ್ಟಿ ಹೀನ ವಿಕಲಚೇತನ ಪ್ರವಾಸಿಗರನ್ನು ದೃಷ್ಟಿ ಮರೈನ್ ಜೀವರಕ್ಷಕರು ರಕ್ಷಿಸಿದ್ದಾರೆ. ಉಬ್ಬರವಿಳಿತದಿಂದಾಗಿ ನೀರಿನ ಮಟ್ಟ ಏರುತ್ತಿದ್ದ ಸಂದರ್ಭದಲ್ಲಿ ಈ ಪ್ರವಾಸಿಗರು ನೀರಿಗೆ ಇಳಿದಿದ್ದಾರೆ ಎನ್ನಲಾಗಿದೆ.

ಶುಕ್ರವಾರ ಮಧ್ಯಾಹ್ನ 3.30ರ ಸುಮಾರಿಗೆ ಈ ಘಟನೆ ನಡೆದಿದೆ. ಕರ್ನಾಟಕದ ಅಂಧ ವ್ಯಕ್ತಿಯೊಬ್ಬರು ಗೋವಾದ ಪ್ರವಾಸೋದ್ಯಮಕ್ಕಾಗಿ ಬಾಗಾ ಬೀಚ್‍ಗೆ ಬಂದಿದ್ದರು. ಒಬ್ಬ ಮಹಿಳೆ ಮತ್ತು ಮೂವರು ಪುರುಷರು ಎಂಬ ನಾಲ್ಕು ಜನರು ನೀರಿಗೆ ಇಳಿದರು. ಅವರು ನೀರಲ್ಲಿ ದೊಡ್ಡ ಅಲೆ ಎದ್ದಿರುವುದನ್ನು ಊಹಿಸಿರಲಿಲ್ಲ.

ಆದರೆ, ಸಮುದ್ರದಲ್ಲಿ ಉಬ್ಬರದಿಂದಾಗಿ ಭಾರಿ ಪ್ರಮಾಣದಲ್ಲಿ ನೀರು ಉಕ್ಕುತ್ತಿತ್ತು ಈ ನಾಲ್ವರೂ ವಿಕಲ ಚೇತನರು ನೀರಲ್ಲಿ ಮುಳುಗುತ್ತಿದ್ದರು. ಇದನ್ನು ಬೀಚ್‍ನಲ್ಲಿದ್ದ ಜೀವರಕ್ಷಕ ಸಿಬ್ಬಂದಿ ಗಮನಿಸಿದ್ದಾರೆ. ತಕ್ಷಣ ಜೀವರಕ್ಷಕರಾದ ವಿನೋದ್ ಗಾವ್ಕರ್, ಫೊಂಡು ಗವಾಸ್ ಮತ್ತು ಸೂರ್ಯಕಾಂತ್ ಪರೇಕರ್ ಅವರು ಸರ್ಫ್‍ಬೋರ್ಡ್ ಮತ್ತು ರಕ್ಷಣಾ ಟ್ಯೂಬ್‍ಗಳ ಸಹಾಯದಿಂದ ನೀರಿಗೆ ಧಾವಿಸಿದರು. ನಾಲ್ವರು ಪ್ರವಾಸಿಗರನ್ನು ಸುರಕ್ಷಿತವಾಗಿ ರಕ್ಷಿಸಿ ನೀರಿಂದ ಹೊರಗೆ ಕರೆತರಲಾಯಿತು. ನೀರಿನಲ್ಲಿ ಮುಳುಗುತ್ತಿದ್ದ ನಾಲ್ವರು ಪ್ರವಾಸಿಗರು ಕುರುಡರು ಎಂದು ನಂತರ ತಿಳಿದು ಬಂದಿದೆ.