ಶಿರಸಿ: ಇಲ್ಲಿನ ಬಾಳೆಪಟ್ಟೆಯ ಉತ್ಪನ್ನ ತಯಾರಿಸುವ ಮೂಲಕ ಕಳೆದ ಹದಿನೆಂಟು ವರ್ಷಗಳಿಂದ ದಿವ್ಯಾಂಗರ ಪುನರ್ವಸತಿ‌ ಕಲ್ಪಿಸುತ್ತಿರುವ ನಗರದ ಪ್ರಶಾಂತಿ ಫೌಂಡೇಶನ್ ಗೆ ಶ್ರೇಷ್ಠ ಸಾಮಾಜಿಕ ಮಹಿಳಾ ವಾಣಿಜ್ಯ ಸಂಸ್ಥೆ‌ ಎಂಬ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ರಾಷ್ಟ್ರೀಯ ಬಾಳೆ ಅಭಿವೃದ್ಧಿ ಮಂಡಳಿಯು ಈ ಪ್ರಶಸ್ತಿಯನ್ನು ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ಪ್ರದಾನ ಮಾಡಲಾಯಿತು. ಡಾ. ಮಾಲಾ ಗಿರಿಧರ ಪ್ರಶಸ್ತಿ ಸ್ವೀಕರಿಸಿದರು.
ಈ ವೇಳೆ ಪ್ರಮುಖರಾದ ತ್ರಿಲೋಚನ‌ ಮಹಾಪಾತ್ರ, ಡಾ.ವಿ.ಪಳಿನಿ,ಡಾ. ಶೇಖ್ ಎನ್ ಮೀರಾ, ಡಾ.ತಂಗವೇಲು, ಡಾ.ರೂಪಾ ಪಾಟೀಲ ಇತರರು ಇದ್ದರು.
ಪ್ರಶಾಂತಿ ಫೌಂಡೇಶನ್ ದಿವ್ಯಾಂಗರ ಏಳ್ಗೆಗಾಗಿ‌ ಕೆಲಸ ಮಾಡುತ್ತಿದ್ದು ಬಾಳೆ‌ನಾರಿನ ಉತ್ಪನ್ನ ತಯಾರಿಸಿ ಮಾರುಕಟ್ಟೆಗೆ ಕಳಿಸುತ್ತಿದೆ. ಈ ಉತ್ಪನ್ನಗಳನ್ನು ದಿವ್ಯಾಂಗರೇ ತಯಾರಿಸುತ್ತಿದ್ದು, ಅವರನ್ನು‌ ಮುಖ್ಯವಾಹಿನಿಗೆ ತರುವಲ್ಲಿ ಈ ಸಂಸ್ಥೆ ನಿರಂತರ ಶ್ರಮಿಸುತ್ತಿದೆ ಎಂಬುದು‌ ಉಲ್ಲೇಖನೀಯ.