ಸುದ್ದಿ ಕನ್ನಡ ವಾರ್ತೆ
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಹಳಿಯಾಳ ಹಾಗೂ ಪೊಲೀಸ್ ಇಲಾಖೆ ಹಳಿಯಾಳ ಇವರ ಸಂಯುಕ್ತ ಆಶ್ರಯದಲ್ಲಿ *ಸಿವಿಲ್ ಪೊಲೀಸ್ ಕಾನಸ್ಟೇಬಲ್ ಹುದ್ದೆಗಳ ಆಕಾಂಕ್ಷಿಗಳಿಗಾಗಿ ಮಾಹಿತಿ ಕಾರ್ಯಾಗಾರವನ್ನು* ಸಿಬಿಡಿ ಆರ್ಸೆಟಿ ಸಭಾಭವನದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಳಿಯಾಳ ಪೊಲೀಸ್ ಠಾಣೆಯ *ಸಿಪಿಐ ಜೈಪಾಲ ಪಾಟೀಲ* ಅವರು, ಇಂದಿನ ಯುವಜನತೆ ಸರ್ಕಾರಿ ಸೇವೆಯತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಸಂತಸದ ಸಂಗತಿ. ಪೊಲೀಸ್ ಇಲಾಖೆಯು ಕೇವಲ ಉದ್ಯೋಗವಲ್ಲ, ಸಮಾಜ ಸೇವೆಗೆ ದೊರೆಯುವ ಒಂದು ಮಹತ್ತರ ಅವಕಾಶವಾಗಿದೆ. ಅಭ್ಯರ್ಥಿಗಳು ಶಿಸ್ತು, ಸಮಯಪ್ರಜ್ಞೆ ಹಾಗೂ ನಿರಂತರ ಪರಿಶ್ರಮದ ಮೂಲಕ ತಮ್ಮ ಗುರಿಯನ್ನು ಸಾಧಿಸಬೇಕು ಎಂದು ಕರೆ ನೀಡಿದರು.. ಅವರು ತಮ್ಮ ಅನುಭವಗಳನ್ನು ಹಂಚಿಕೊಂಡು, ಗ್ರಾಮೀಣ ಭಾಗದ ಯುವಕರು ಕೂಡ ಸೂಕ್ತ ಮಾರ್ಗದರ್ಶನ ಮತ್ತು ದೃಢ ಸಂಕಲ್ಪದ ಮೂಲಕ ಪೊಲೀಸ್ ಇಲಾಖೆಯಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವಾಗ ಸಮಯ ನಿರ್ವಹಣೆ, ಮಾನಸಿಕ ದೃಢತೆ ಹಾಗೂ ದೈಹಿಕ ಆರೋಗ್ಯಕ್ಕೆ ಸಮಾನ ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದರು. ಯುವತಿಯರು ಸಹ ಪೊಲೀಸ್ ಇಲಾಖೆಯಂತಹ ಸವಾಲಿನ ಕ್ಷೇತ್ರಗಳಲ್ಲಿ ಆತ್ಮವಿಶ್ವಾಸದಿಂದ ಮುಂದೆ ಬರಬೇಕು ಎಂದು ಪ್ರೋತ್ಸಾಹಿಸಿದರು.
ಮುಖ್ಯ ಅತಿಥಿ ಹಾಗೂ ಉಪನ್ಯಾಸಕರಾಗಿ ಭಾಗವಹಿಸಿದ್ದ ಹಳಿಯಾಳ ಪೊಲೀಸ್ ಠಾಣೆಯ *ಪಿ.ಎಸ್.ಐ ಬಸವರಾಜ ಮಬನೂರ* ಅವರು ಸಿವಿಲ್ ಪೊಲೀಸ್ ಕಾನಸ್ಟೇಬಲ್ ನೇಮಕಾತಿಯ ಸಂಪೂರ್ಣ ಪ್ರಕ್ರಿಯೆ, ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ಆಯ್ಕೆ ವಿಧಾನಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಅಭ್ಯರ್ಥಿಗಳು ದಿನನಿತ್ಯದ ಅಧ್ಯಯನ, ಸಾಮಾನ್ಯ ಜ್ಞಾನ ವೃದ್ಧಿ ಹಾಗೂ ದೈಹಿಕ ಕ್ಷಮತೆಯ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಬೇಕು ಎಂದು ಸಲಹೆ ನೀಡಿದರು. ಆತ್ಮವಿಶ್ವಾಸ ಮತ್ತು ನಿರಂತರ ಪ್ರಯತ್ನ ಯಶಸ್ಸಿನ ಮೂಲಮಂತ್ರಗಳಾಗಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿ.ಆರ್.ಡಿ.ಎಮ್ ಟ್ರಸ್ಟ್ ಹಳಿಯಾಳದ ಆಡಳಿತಾಧಿಕಾರಿಗಳಾದ *ಪ್ರಕಾಶ ಪ್ರಭು* ಅವರು, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯು ಗ್ರಾಮೀಣ ಯುವಜನರಿಗೆ ಕೌಶಲ್ಯಾಭಿವೃದ್ಧಿ, ಸ್ವ ಉದ್ಯೋಗ ಹಾಗೂ ಉದ್ಯೋಗ ಮಾರ್ಗದರ್ಶನ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದ್ದು, ಇಂತಹ ಕಾರ್ಯಕ್ರಮಗಳು ಯುವಕರಲ್ಲಿ ಜಾಗೃತಿ ಮೂಡಿಸಿ ಅವರ ಭವಿಷ್ಯ ನಿರ್ಮಾಣಕ್ಕೆ ಸಹಕಾರಿಯಾಗುತ್ತವೆ. ಸಂಸ್ಥೆಯು ಮುಂದೆಯೂ ಪೊಲೀಸ್, ಸೇನೆ ಹಾಗೂ ಇತರೆ ಸರ್ಕಾರಿ ಉದ್ಯೋಗಗಳ ಆಕಾಂಕ್ಷಿಗಳಿಗಾಗಿ ವಿಶೇಷ ತರಬೇತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.
ಆರಂಭದಲ್ಲಿ ಹಳಿಯಾಳದ ಸಿಬಿಡಿ ಆರ್ಸೆಟಿಯ ಯೋಜನಾ ಸಂಯೋಜಕರಾದ *ವಿನಾಯಕ ಅ. ಚವ್ಹಾಣ* ಅವರು ಅತಿಥಿಗಳನ್ನು ಸ್ವಾಗತಿಸಿ, ಸಂಸ್ಥೆಯ ವಿವಿಧ ತರಬೇತಿ ಹಾಗೂ ಉದ್ಯೋಗೋದ್ಯಮ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಹಳಿಯಾಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ್ದ *100 ಕ್ಕೂ ಹೆಚ್ಚು ಪೊಲೀಸ್ ಹುದ್ದೆಗಳ ಆಕಾಂಕ್ಷಿಗಳು* ಭಾಗವಹಿಸಿ ಕಾರ್ಯಕ್ರಮದ ಸಂಪೂರ್ಣ ಪ್ರಯೋಜನ ಪಡೆದುಕೊಂಡರು. ಅಭ್ಯರ್ಥಿಗಳು ಉಪನ್ಯಾಸಕರೊಂದಿಗೆ ಸಂವಾದ ನಡೆಸಿ ತಮ್ಮ ಸಂದೇಹಗಳಿಗೆ ಪರಿಹಾರ ಕಂಡುಕೊಂಡರು.
ಕಾರ್ಯಕ್ರಮವನ್ನು ಸಂಸ್ಥೆಯ ಉಪನ್ಯಾಸಕರಾದ *ವಿರೇಶ ತಾಳಿಕೋಟಿ* ಅವರು ನಿರೂಪಿಸಿ ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿಗಳಾದ ಬಾಹುಬಲಿ ಚಿನ್ನಗಿ, ವಿನೋದ್ ಅಗಸರ, ಉಳವಯ್ಯ ಬೆಂಡಿಗೇರಿ,ಮಂಜುನಾಥ್ ನಿಲ್ಕರ್ ಮತ್ತು ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಯಾಗಿ ನಡೆಸಲು ಸಹಕರಿಸಿದರು.
