ಸುದ್ದಿ ಕನ್ನಡ ವಾರ್ತೆ
ಕುಮಟಾ: ಜಿಲ್ಲೆಯ ಹೆಮ್ಮೆಯ ಪುತ್ರಿ ಕು. ಪ್ರತೀಕ್ಷಾ ಜಯಂತ ಪೈ ವೈದ್ಯಕೀಯ ವಿಜ್ಞಾನದಲ್ಲಿ ಎಂಬಿಬಿಎಸ್ ಹಾಗೂ ಇದರ ಸ್ನಾತಕೋತ್ತರ ಪದವಿಯ ಬಳಿಕ ರಾಷ್ಟ್ರಮಟ್ಟದ ವೈದ್ಯಕೀಯ ಸಂಸ್ಥೆಗಳ ಸೂಪರ್ ಸ್ಪೆಶಾಲಿಟಿ ಕೋರ್ಸ್ಗಳ ಪ್ರವೇಶಕ್ಕಾಗಿ All India Institute of Medical Science (AIIMS) New Delhi ಆಯೋಜಿಸುವ INI SS-2026 ಪರೀಕ್ಷೆಯ DM (Neurology) ವಿಷಯದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ರ್ಯಾಂಕ್ ಗಳಿಸಿರುತ್ತಾರೆ. ಈ ಪರೀಕ್ಷೆಯನ್ನು CBT (Computer Based Test) ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಈ ರೀತಿ ಎರಡು ಹಂತಗಳಲ್ಲಿ ರಾಷ್ಟ್ರದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಆಯೋಜಿಸಲಾಗುತ್ತದೆ. ಈ ಎರಡು ಹಂತಗಳ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ರ್ಯಾಂಕ್ಗಳನ್ನು ನೀಡಲಾಗುತ್ತದೆ. ಪ್ರತೀಕ್ಷಾ ಪೈ ಇವರು ಈಗಾಗಲೇ ಎಂಬಿಬಿಎಸ್ ಹಾಗೂ ಎಂ.ಡಿ. ಪದವಿಗಳನ್ನು ಕೇಂದ್ರ ಸರ್ಕಾರದ ಶಿಷ್ಯವೇತನ ಪರೀಕ್ಷೆಗಳನ್ನು ಉನ್ನತ ಹಂತದ ಶ್ರೇಣಿಗಳನ್ನು ಪಡೆದು ಪಾಸಾಗಿ ಸಂಪೂರ್ಣ ಶಿಷ್ಯವೇತನ ಪಡೆದು ಮುಗಿಸಿರುತ್ತಾರೆ. ಅಲ್ಲದೇ ಈ ಹಿಂದೆ 2021-2022 ಶೈಕ್ಷಣಿಕ ವರ್ಷದಲ್ಲಿ ರಾಜೀವಗಾಂಧಿ ವಿಶ್ವವಿದ್ಯಾಲಯಕ್ಕೆ ಎಂಬಿಬಿಎಸ್ನಲ್ಲಿ ಪ್ರಥಮ ರ್ಯಾಂಕ್ನೊಂದಿಗೆ 12 ಬಂಗಾರದ ಪದಕಗಳನ್ನು ಪಡೆದು ಬೆಂಗಳೂರು ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಇತಿಹಾಸದಲ್ಲಿಯೇ ಹೊಸ ಮೈಲಿಗಲ್ಲನ್ನು ಸ್ಥಾಪಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಪ್ರತೀಕ್ಷಾ ಪೈ ಇವರು ಗೋಕರ್ಣ ಮೂಲದ ಮಾರುತಿ ಜಿ.ಪೈ ಹಾಗೂ ಶಾಂತಾ ಎಮ್.ಪೈ ಇವರ ಮೊಮ್ಮಗಳು, ಜಯಂತ ಮಾರುತಿ ಪೈ ಹಾಗೂ ಧಾರವಾಡದ ಜೆ.ಎಸ್.ಎಸ್. ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ಭಾರತಿ ವೆಂಕಟೇಶ ಶಾನಭಾಗ ಇವರ ಸುಪುತ್ರಿಯಾಗಿದ್ದಾಳೆ ಹಾಗೂ ಕುಮಟಾದ ಖ್ಯಾತ ನ್ಯಾಯವಾದಿಗಳಾದ ದಿ. ವೆಂಕಟೇಶ ನರಸಿಂಹ ಶಾನಭಾಗ ಇವರ ಮೊಮ್ಮಗಳಾಗಿದ್ದಾಳೆ. ಇವರನ್ನು ಕುಟುಂಬದ ಎಲ್ಲ ಸದಸ್ಯರು ಹಾಗೂ ಇವಳು ಶಿಕ್ಷಣ ಪಡೆದ ವೈದ್ಯಕೀಯ ಸಂಸ್ಥೆಯ ಆಡಳಿತ ಮಂಡಳಿ, ಬೋಧಕ-ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
ವೈದ್ಯಕೀಯ ವಿಜ್ಞಾನದ INI SS- 2026 ಪರೀಕ್ಷೆ: ಪ್ರತೀಕ್ಷಾ ಪೈ ರಾಷ್ಟ್ರಕ್ಕೆ ಪ್ರಥಮ
