ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ರೈತರಿಗೆ ಸಾವಯವ ಕೃಷಿಯ ಉತ್ತೇಜನದ ದೃಷ್ಟಿಯಿಂದ ಸ್ಕೋಡ್ ವೆಸ್ ಶಿರಸಿ ಹಾಗೂ ತೋಟಗಾರಿಕಾ ಇಲಾಖೆಯ ವತಿಯಿಂದ ಒಂದು ದಿನದ ಅಧ್ಯಯನ ಪ್ರವಾಸ ಹಮ್ಮಿಕೊಳ್ಳಲಾಗಿತ್ತು. ತಾಲೂಕಿನ ನಂದಿಗದ್ದೆ, ಉಳವಿ, ಕುಂಬಾರವಾಡಾ(ಕಾತೇಲಿ)ಗ್ರಾಮ ಪಂಚಾಯತ ವ್ಯಾಪ್ತಿಯ ಸುಮಾರು 70 ಕ್ಕೂ ಹೆಚ್ಚಿನ ಪುರುಷ,ಮಹಿಳಾ ರೈತರು ಪಾಲ್ಗೊಂಡಿದ್ದ ಅಧ್ಯಯನ ಪ್ರವಾಸದಲ್ಲಿ ಉಪಯುಕ್ತ ಮಾಹಿತಿಯನ್ನು ಪಡೆದುಕೊಂಡರು.
ಅಧ್ಯಯನ ಪ್ರವಾಸದ ಆರಂಭದಲ್ಲಿ ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಪಿ.ಎಂ.ಎಫ್.ಎಂ.ಇ ಯೋಜನೆಯಡಿ ಬೆಂಬಲಿತ ಘಟಕ ಸರ್ವಜ್ಞೇಂದ್ರ ಫಾರ್ಮರ್ಸ್ ಫ್ರೋಡ್ಯೂಸರ್ ಕಂಪನಿ ಲಿಮಿಟೆಡ್ ನ ಸುವಿಲ್ ಹೆಗಡೆಯವರು ಕಂಪನಿಯ ಕಾರ್ಯಚಟುವಟಿಕೆಯ ಕುರಿತು ವಿವರವಾದ ಮಾಹಿತಿ ನೀಡಿದರು. ಶಿರಸಿ ಸ್ಕೋಡ್ ವೆಸ್ ಸಂಸ್ಥೆಯ ವಿನಾಯಕ ಪೈ ಎಲ್ಲರನ್ನೂ ಸ್ವಾಗತಿಸಿ,ಪ್ರಾಸ್ತಾವಿಕ ನುಡಿಗಳನ್ನಾಡಿದರು.
ನಂತರ ಶಿರಸಿ ತಾಲೂಕಿನ ಅರಗಿನಮನೆಯ ಪ್ರಗತಿಪರ ಕೃಷಿಕರು,ಉತ್ತಮ ಕೃಷಿಕ ಪ್ರಶಸ್ತಿ ಪುರಸ್ಕೃತರಾದ ಮಹೇಶ ಹೆಗಡೆಯವರು ತಮ್ಮ ತೋಟದಲ್ಲಿಯ ಅಡಿಕೆ,ಕಾಫಿ, ಕಾಳುಮೆಣಸಿನ ಬೆಳೆಯ ಅವುಗಳ ನಿರ್ವಹಣೆಯ ಕುರಿತು,ಜೊತೆಯಲ್ಲಿ ಪಶುಸಂಗೋಪನೆಯ ಉಪಯುಕ್ತ ಮಾಹಿತಿ ನೀಡಿದರು.ಉಪಸ್ಥಿತರಿದ್ದ ರೈತರು ಚರ್ಚಿಸಿ ವಿವಿಧ ಮಾಹಿತಿಗಳನ್ನು ಪಡೆದುಕೊಂಡರು.ಈ ಸಂದರ್ಭದಲ್ಲಿ ಸ್ಕೋಡ್ ವೆಸ್ ಸಂಸ್ಥೆಯ ಪರವಾಗಿ ಮಹೇಶ ಹೆಗಡೆ ಕುಟುಂಬದದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಎಲ್ಲಾ ರೈತ ಭಾಂದವರಿಗೆ ಊಟೋಪಚಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಪರಂಪರಾಗತ ಕೃಷಿ ವಿಕಾಸ ಯೋಜನೆಯ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾದ ಅಮರ ಭಾಗ್ವತ,ಸೂರಜ್ ಕೂಮಗಾಳಕರ,ಸುಭಾಷ ನಾಯ್ಕ ಅಧ್ಯಯನ ಪ್ರವಾಸದ ರೈತರಿಗೆ ಎಲ್ಲ ವಿಭಾಗದಲ್ಲಿ ಅತ್ಯುತ್ತಮ ಸಹಕಾರ ನೀಡಿದರು.
