ಸುದ್ದಿ ಕನ್ನಡ ವಾರ್ತೆ
ಬೆಂಗಳೂರು: ನೈರುತ್ಯ ಮುಂಗಾರು ಅರಬ್ಬಿ ಸಮುದ್ರ ಮತ್ತು ಬಂಗಾಳ
ಕೊಲ್ಲಿಯ ಹಲವು ಭಾಗಗಳಿಗೆ ವಿಸ್ತರಿಸಿದ್ದು, ಕರ್ನಾಟಕದಾದ್ಯಂತ ಮಳೆಯ ಆರ್ಭಟ ಶುರುವಾಗಲಿದೆ. ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ಮುಂದಿನ ಒಂದು ವಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ, ಗುಡುಗು ಸಹಿತ ಗಾಳಿ ಮತ್ತು ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ.
ನೈರುತ್ಯ ಮುಂಗಾರು ವೇಗವಾಗಿ ಮುನ್ನುಗ್ಗುತ್ತಿದೆ. ಈಗಾಗಲೇ ಅಂಡಮಾನ್ ಸಮುದ್ರದ ಬಹುತೇಕ ಭಾಗಗಳನ್ನು ಆವರಿಸಿರುವ ಮುಂಗಾರು, ಮುಂದಿನ 3-4 ದಿನಗಳಲ್ಲಿ ಅರಬ್ಬಿ ಸಮುದ್ರದ ಮತ್ತಷ್ಟು ಭಾಗಗಳಿಗೆ ಪ್ರವೇಶಿಸಲಿದೆ. ಪ್ರಸ್ತುತ ಬಂಗಾಳ ಕೊಲ್ಲಿಯ ಆಗ್ನೆಯ ಮತ್ತು ಮಧ್ಯಭಾಗದಲ್ಲಿ ವಾಯುಭಾರ ಕುಸಿತದ ಸುಳಿವು ಕಂಡುಬಂದಿದ್ದು, ಇದು ಮಳೆಯ ತೀವ್ರತೆಯನ್ನು ಹೆಚ್ಚಿಸಲಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೇ 23 ರಿಂದ ಮೇ 27 ರವರೆಗೆ ಗುಡುಗು ಮತ್ತು ಮಿಂಚಿನ ಸಹಿತ ಸಾಧಾರಣ ಮಳೆಯಾಗಲಿದೆ. ಸಮುದ್ರ ತೀರದಲ್ಲಿ ಗಾಳಿಯ ವೇಗ ಹೆಚ್ಚಿರಲಿದ್ದು, ಮೀನುಗಾರರು ಮತ್ತು ಪ್ರವಾಸಿಗರು ಜಾಗರೂಕರಾಗಿರಲು ಸೂಚಿಸಲಾಗಿದೆ.
