ಸುದ್ದಿ ಕನ್ನಡ ವಾರ್ತೆ

ಪಣಜಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಗೋವಾ ಕನ್ನಡ ಸಮಾಜ ಪಣಜಿ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 1 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಪರ್ವರಿಯ ಆಜಾದ ಭವನದಲ್ಲಿ 71 ನೇಯ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ” ಕನ್ನಡ ಭಾಷಾ ಸಂಸ್ಕೃತಿ ಸೊಗಡು-ಕನ್ನಡ ಡಿಂಡಿಮ ಉತ್ಸವ-2026″ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕನ್ನಡ ಅಭಿವೃದ್ಧಿ ಪ್ರಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಸಮಾರಂಭವನ್ನು ಉಧ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆದಾಯ ತೆರಿಗೆ ಇಲಾಖೆ ಪಣಜಿಯ ಉಪ ಆಯುಕ್ತ ಕುಮಾರಿ ಪ್ರಿಯಾಂಕ ಕಾಂಬ್ಳೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ ರವರು ಉಪಸ್ಥಿತರಿರುವರು.

ಪಣಜಿಯ ನಿವೃತ್ತ ಕೇಂದ್ರೀಯ ಗೃಂಥಾಲಯ ಮೇಲ್ವಿಚಾರಕರಾದ ವೀರಪ್ಪ.ಬಿ.ಹುಬ್ಬಳ್ಳಿ ರವರು ಕನ್ನಡ ಜ್ಯೋತಿಯನ್ನು ಅನಾವರಣಗೊಳಿಸಲಿದ್ದಾರೆ. ಗೌರವ ಅತಿಥಿಗಳಾಗಿ ಗೋವಾದ ರಾಷ್ಟ್ರೀಯ ವರದಿಗಾರ ಅನೀಲ್ ಸನದಿ, ಉತ್ತರಕನ್ನಡದ ಲೇಖಕಿ ಸುಕನ್ಯಾ ದೇಸಾಯಿ ರವರು ಉಪಸ್ಥಿತರಿರುವರು.

ಗೋವಾದಲ್ಲಿ ಕನ್ನಡಿಗರ ಸಾಧನೆ ಮತ್ತು ಕೊಡುಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಗೋವಾ ಸರ್ಕಾರದ ನಿವೃತ್ತ ನಿರ್ದೇಶಕ ಸುರೇಶ್ ಶಾನುಭಾಗ್ ಹಾಗೂ ಗೋವಾದಲ್ಲಿ ಕನ್ನಡ ಭಾಷಾ ಬೆಳವಣಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಪ್ಸಾದ ಸೇಂಟ ಜೇವಿಯರ್ ಉಚ್ಛ ಮಾಧ್ಯಮಿಕ ವಿದ್ಯಾಲಯದ ಪ್ರಾಧ್ಯಾಪಕ ಮಹಾಬಲ ಭಟ್ ರವರು ಮಂಡಿಸಲಿದ್ದಾರೆ.

ಸಭಾ ಕಾರ್ಯಕ್ರಮದ ನಂತರ ಗೋವಾ ಕನ್ನಡಿಗರು ಹಾಗೂ ಚಿಣ್ಣರಿಂದ ಸಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮಕ್ಕೆ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ್ ಹಾಗೂ ಕಾರ್ಯದರ್ಶಿ ಶ್ರೀಕಾಂತ ಲೋಣಿ ಪ್ರಕಟಣೆಯಲ್ಲಿ ಕೋರಿದ್ದಾರೆ.