ಸುದ್ದಿ ಕನ್ನಡ ವಾರ್ತೆ
ಶಿರಸಿ: ಕಳೆದ ಮೂರು ದಶಕಗಳಿಂದ ಪರಿಸರ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಇಲ್ಲಿನ ಸಮಗ್ರ ವಿಕಾಸ ಟ್ರಸ್ಟ್ ಸಂಸ್ಥೆಯ ಅಧ್ಯಕ್ಷ ಉಮಾಪತಿ ಭಟ್ ಕೆ.ವಿ. ಅವರಿಗೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಕರ್ನಾಟಕ ಜೀವವೈವಿಧ್ಯ ಪ್ರಶಸ್ತಿ ಲಭಿಸಿದೆ. ಪರಿಸರ ಸಂರಕ್ಷಣೆ ಮತ್ತು ಜೀವವೈವಿಧ್ಯದ ಉಳಿವಿಗಾಗಿ ಅವರು ನೀಡಿದ ಗಣನೀಯ ಕೊಡುಗೆಯನ್ನು ಪರಿಗಣಿಸಿ ಈ ಗೌರವವನ್ನು ನೀಡಲಾಗಿದೆ. 2026ರ ಮೇ 22ರಂದು ಬೆಂಗಳೂರಿನ ವಿಧಾನಸೌಧದಲ್ಲಿ ಆಯೋಜಿಸಲಾಗಿರುವ ‘ವಿಶ್ವ ಜೀವವೈವಿಧ್ಯ ದಿನಾಚರಣೆ’ಯ ಸಮಾರಂಭದಲ್ಲಿ ಈ ಪ್ರಶಸ್ತಿ ಪುರಸ್ಕಾರ ಪ್ರದಾನ ಮಾಡಲಾಗುತ್ತಿದೆ.
ರಾಜ್ಯದ ಸುಮಾರು 140ಕ್ಕೂ ಹೆಚ್ಚು ಕಡೆಗಳಲ್ಲಿ ನವಗ್ರಹ ವನಗಳನ್ನು ನಿರ್ಮಾಣ ಮಾಡಿದ್ದಲ್ಲದೇ, ಸಂಗೀತ ಸ್ವರವನ, ತೀರ್ಥಂಕರರ ವನ, ಕುಟುಂಬ ವನ, ಅಶೋಕ ವನ, ಅಕ್ಷರ ವನ ಹಾಗೂ ಶ್ರೀ ಮಾರಿಕಾಂಬಾ ವನಗಳನ್ನು ನಿರ್ಮಿಸಿದ ಸಾಧನೆ ಇವರದ್ದಾಗಿದೆ. ಯುವಕರಿಗಾಗಿ “ಪರಿಸರ ಪ್ರಶಿಕ್ಷಣ”, ಮಕ್ಕಳಿಗಾಗಿ “ಹಸಿರು ಪಯಣ” ನಿಸರ್ಗ ಜ್ಞಾನ ಶಿಕ್ಷಣ, ಟೆರೆಸ್ ಗಾರ್ಡನ್ ತರಬೇತಿ, ಪಕ್ಷಿವೀಕ್ಷಣೆ, ಜೀವವೈವಿಧ್ಯ ತರಬೇತಿ, ಹಸಿರು ಆಹಾರ-ಹಸಿರು ಆರೋಗ್ಯ ಹಾಗೂ “ಮನೆಮದ್ದು” ತರಬೇತಿಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಜೌಗುಭೂಮಿ ಆಂದೋಲನ ಹಾಗೂ ಜೀವವೈವಿಧ್ಯ ದಾಖಲಾತಿ ನಡೆಸಿದ್ದಾರೆ. ಕಾನಸೂರು, ಬನವಾಸಿ, ಅಂಡಗಿ, ಭಾಶಿ, ದೊಡ್ಡನೆ ಬದನಗೋಡ, ಗುಡ್ನಾಪುರ ಹಾಗೂ ಶಿರಸಿ ನಗರದ ಜೀವವೈವಿಧ್ಯಗಳನ್ನು ವೈಜ್ಞಾನಿಕವಾಗಿ ದಾಖಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ನದಿಗಳ ಅಧ್ಯಯನ, ಕಲ್ಯಾಣಿ ಸ್ವಚ್ಛತೆ, ಕೆರೆಗಳ ಉಳಿವಿಗಾಗಿ ಅಭಿಯಾನ ಹಾಗೂ ಮಳೆಕೊಯ್ಲು ಜಾಗೃತಿ ಮೂಡಿಸುವ ಮೂಲಕ ಜಲಸಂರಕ್ಷಣಾ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ಹಲವು ಪರಿಸರ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಪರಿಸರ ಗೀತಾ ಅಭಿಯಾನ ನಡೆಸಿದ್ದಾರೆ. ಸ್ಥಳೀಯ ಪತ್ರಿಕೆಯಲ್ಲಿ ‘ಸಸ್ಯಪುರಾಣ’ ಅಂಕಣದ ಮೂಲಕವೂ ಜನಪ್ರಿಯರಾಗಿದ್ದಾರೆ.
