ಸುದ್ದಿ ಕನ್ನಡ ವಾರ್ತೆ
ದುಬಾರೆ: ಆನೆ ಶಿಬಿರದಲ್ಲಿ ನಡೆದ ಮಹಿಳಾ ಪ್ರವಾಸಿಗೆಯ ಸಾವಿನ ಘಟನೆ ರಾಜ್ಯದಾದ್ಯಂತ ಆತಂಕ ಮೂಡಿಸಿದ್ದು, ವನ್ಯಜೀವಿಗಳ ಬಗ್ಗೆ ಹೆಚ್ಚಿನ ಜಾಗೃತಿ ಮತ್ತು ಎಚ್ಚರಿಕೆಯ ಅಗತ್ಯವನ್ನು ಮತ್ತೆ ನೆನಪಿಸಿದೆ.
ಆನೆಗಳು ಮಾನವರ ಆರೈಕೆಯಲ್ಲಿ ಇದ್ದರೂ, ಅವು ಮೂಲತಃ ವನ್ಯಜೀವಿಗಳೇ. ಅವುಗಳ ಮನಸ್ಥಿತಿ ಮತ್ತು ವರ್ತನೆ ಯಾವ ಕ್ಷಣದಲ್ಲಿ ಬದಲಾಗುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಆದ್ದರಿಂದ ಫೋಟೋ, ಸೆಲ್ಪಿ ಅಥವಾ ರೀಲ್ಸ್ ಮಾಡುವ ಉದ್ದೇಶದಿಂದ ಪ್ರಾಣಿಗಳ ಅತೀ ಹತ್ತಿರ ಹೋಗುವುದು ಜೀವಕ್ಕೆ ಅಪಾಯಕಾರಿಯಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಪ್ರವಾಸಿ ತಾಣಗಳಿಗೆ ಭೇಟಿ ನೀಡುವಾಗ ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಅತ್ಯಂತ ಮುಖ್ಯ. ಅರಣ್ಯ ಇಲಾಖೆ ಸಿಬ್ಬಂದಿ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ವನ್ಯಜೀವಿಗಳನ್ನು ಕೇವಲ ಮನರಂಜನೆಯ ವಸ್ತುವಾಗಿ ನೋಡುವ ಬದಲು, ಅವುಗಳ ಸ್ವಭಾವ ಮತ್ತು ಪರಿಸರವನ್ನು ಗೌರವಿಸುವ ಜವಾಬ್ದಾರಿ ಪ್ರತಿಯೊಬ್ಬ ಪ್ರವಾಸಿಗರದ್ದಾಗಿದೆ.
ಈ ದುರ್ಘಟನೆ ಸಮಾಜಕ್ಕೆ ಒಂದು ದೊಡ್ಡ ಪಾಠ ಕಲಿಸಿದೆ ಪ್ರಕೃತಿಯನ್ನು ಪ್ರೀತಿಸುವುದು ಅಂದರೆ ಅದರ ಮಿತಿಗಳನ್ನು ಗೌರವಿಸುವುದು. ಕ್ಷಣಿಕ ಖುಷಿಗಾಗಿ ಅಥವಾ ಸಾಮಾಜಿಕ ಜಾಲತಾಣದ ಪ್ರದರ್ಶನಕ್ಕಾಗಿ ಜೀವವನ್ನು ಪಣಕ್ಕಿಡಬಾರದು ಎಂಬ ಸಂದೇಶವನ್ನು ಈ ಘಟನೆ ನೀಡಿದೆ.
