ಸುದ್ದಿ ಕನ್ನಡ ವಾರ್ತೆ
​ಯಲ್ಲಾಪುರ: ತಾಲೂಕಿನ ಅರಬೈಲ್ ಘಟ್ಟದಲ್ಲಿ ದೆಹಲಿಯಿಂದ ಕೇರಳಕ್ಕೆ ಕಬ್ಬಿಣದ ಪೈಪ್‌ಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ್ದು ಅಪಘಾತದಲ್ಲಿ, ಲಾರಿಯಿಂದ ಹೊರಕ್ಕೆ ಜಿಗಿದ ಮಾಲೀಕ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಸಂಭವಿಸಿದೆ. ಲಾರಿಯಲ್ಲೇ ಇದ್ದ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

​ಹರಿಯಾಣ ಮೂಲದ ಜಲಾಲುದ್ದೀನ್ ಮೃತಪಟ್ಟ ದುರ್ದೈವಿ ಲಾರಿ ಮಾಲೀಕರಾಗಿದ್ದಾರೆ. ಮೇ 14ರಂದು ದೆಹಲಿಯಿಂದ ಕಬ್ಬಿಣದ ಪೈಪ್‌ಗಳನ್ನು ತುಂಬಿಕೊಂಡು ಕೇರಳದ ತಿರುವನಂತಪುರಕ್ಕೆ ಈ ಲಾರಿ ಹೊರಟಿದ್ದು, ಲಾರಿಯಲ್ಲಿ ಮಾಲೀಕ ಜಲಾಲುದ್ದೀನ್ ಅವರು ಪ್ರಯಾಣಿಸುತ್ತಿದ್ದು, ಉತ್ತರ ಪ್ರದೇಶ ಮೂಲದ ನಜೀರ್ ಮಹಾಬುದ್ದೀನ್ ಎಂಬಾತ ಲಾರಿ ಚಾಲನೆ ಮಾಡುತ್ತಿದ್ದನು. ಮೇ 18ರ ಸಂಜೆ ಯಲ್ಲಾಪುರ ದಾಟಿ ಅಂಕೋಲಾ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ, ಅರಬೈಲ್ ಘಟ್ಟದ ತಿರುವಿನಲ್ಲಿ ಎದುರಿನಿಂದ ಬಂದ ವಾಹನವೊಂದನ್ನು ತಪ್ಪಿಸಲು ಹೋಗಿ ಲಾರಿ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಕಂದಕಕ್ಕೆ ಬಿದ್ದಿದೆ.

ಲಾರಿ ಕಂದಕಕ್ಕೆ ಬೀಳುತ್ತಿರುವುದನ್ನು ಕಂಡು ತೀವ್ರ ಆತಂಕಕ್ಕೊಳಗಾದ ಮಾಲೀಕ ಜಲಾಲುದ್ದೀನ್ ಅವರು ಪ್ರಾಣ ಉಳಿಸಿಕೊಳ್ಳುವ ಆತುರದಲ್ಲಿ ಚಲಿಸುವ ಲಾರಿಯಿಂದ ಹೊರಕ್ಕೆ ಜಿಗಿದಿದ್ದಾರೆ. ಈ ವೇಳೆ ಲಾರಿಯ ಅಡಿಗೆ ಸಿಲುಕಿಯೋ ಅಥವಾ ಕಲ್ಲು ಬಂಡೆಗಳಿಗೆ ಬಡಿದೋ ಅವರ ಸೊಂಟ ಹಾಗೂ ದೇಹದ ಇತರ ಭಾಗಗಳಿಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದು, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಆದರೆ, ಸ್ಟೀರಿಂಗ್ ಹಿಡಿದು ಲಾರಿಯೊಳಗೇ ಕುಳಿತಿದ್ದ ಚಾಲಕ ನಜೀರ್ ಮಹಾಬುದ್ದೀನ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

​ಅಪಘಾತದ ಬಳಿಕ ಚಾಲಕ ನಜೀರ್ ತಾನೇ ಫೋನ್ ಮಾಡಿ ಮೃತರ ಸಂಬಂಧಿ ಜಮೀಲ್ ಖಾನ್ ಅವರಿಗೆ ವಿಷಯ ಮುಟ್ಟಿಸಿದ್ದಾನೆ. ವಿಷಯ ತಿಳಿದು ಯಲ್ಲಾಪುರಕ್ಕೆ ಧಾವಿಸಿದ ಜಮೀಲ್ ಖಾನ್ ಅವರು, ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮರಣೋತ್ತರಪರೀಕ್ಷೆಯ ಬಳಿಕ ಶವವನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.