ಸುದ್ದಿ ಕನ್ನಡ ವಾರ್ತೆ
ಗೋಕರ್ಣ:ಹಾರುಮಾಸ್ಕೇರಿಯ
ಪರಂಪರೆಯಿಂದ ಸಹಸ್ರಾರು ಕುಳಾವಿ ಭಜಕರ ಆರಾಧ್ಯ ದೈವವಾಗಿರುವ ಪುರಾತನ ಗಣಪತಿ ದೇವರ ಕಲಾವೃದ್ಧಿ, ಅಷ್ಟಬಂಧ ಹಾಗೂ ಶಿಖರ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಇತ್ತೀಚೆಗೆ ಭಕ್ತಿಭಾವ ಮತ್ತು ವೈಭವದಿಂದ ನಡೆಯಿತು.
ಪ್ರಸಿದ್ಧ ತಾಂತ್ರಿಕ ವೇ. ಗಣಪತಿ ಗಜಾನನ ಹಿರೇ ಹಾಗೂ ಸಹ ಋತ್ವಿಜರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ದೇವಸ್ಥಾನದ ಪ್ರಮುಖರಾದ ವಿನಾಯಕ ಕೃಷ್ಣ ಭಟ್, ಶ್ರೀಧರ ನಾರಾಯಣ ಭಟ್ ಹಾಗೂ ಗಿರೀಶ ರಾಮ ಭಟ್ ಇವರ ಯಜಮಾನತ್ವದಲ್ಲಿ ವಿವಿಧ ಹೋಮ, ಹವನ ಹಾಗೂ ಪೂಜಾ ಕೈಂಕರ್ಯಗಳು ಭಕ್ತಿಭಾವದಿಂದ ನೆರವೇರಿದವು.
ಶುಭ ಮುಹೂರ್ತದಲ್ಲಿ ಗಣಪತಿ ದೇವರ ಹಾಗೂ ದೇವಾಲಯದ ಶಿಖರದ ಪ್ರತಿಷ್ಠಾಪನಾ ಕಾರ್ಯ. ಬಳಿಕ ಅಷ್ಟಬಂಧ, ಗಣಪತಿ ಅಥರ್ವಶೀರ್ಷ ಹವನ, ಪೂರ್ಣಾಹುತಿ, ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಿದವು. ನಂತರ ನಡೆದ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೇಲುಸ್ತುವಾರಿ ಸಮಿತಿ ಸದಸ್ಯರಾದ ವೇ. ಸುಬ್ರಮಣ್ಯ ಚಿತ್ರಿಗೆಮಠ, ಎಂ.ಎನ್. ಭಟ್, ಗಣೇಶ ಹೆಗಡೆ, ಗಣೇಶ ಭಟ್, ದತ್ತಾತ್ರೇಯ ಸುಬ್ರಾಯ ಭಟ್, ಪ್ರಕಾಶ ಹೆಗಡೆ, ಮಹೇಶ ಹೆಗಡೆ, ಸುನೀಲ ಭಟ್, ಚಂದನ ಭಟ್ ಸೇರಿದಂತೆ ಅನೇಕರು ಸಹಕರಿಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
