ಸುದ್ದಿ ಕನ್ನಡ ವಾರ್ತೆ
ಮಳೆ ಮಾಪನ ಕೇಂದ್ರಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿ ಕೊಳ್ಳಲು ಸರಕಾರಕ್ಕೆ ಸಹಾಯಕ ಆಯುಕ್ತರು ಶಿರಸಿ ಇವರ ಮೂಲಕ ಒತ್ತಾಯಿಸಲು ಶಿರಸಿ ಯ ತೋಟಗಾರ್ಸ್ ಸೊಸೈಟಿ, ಮಾರ್ಕೆಟಿಂಗ್ ಸೊಸೈಟಿ ಮತ್ತು ಕದಂಬ ಶಿರಸಿ ಇವರುಗಳು ನಿರ್ಧರಿಸಿ ಈ ಕೆಳಗಿನಂತೆ ಮನವಿ ಮಾಡಿಕೊಂಡಿದ್ದಾರೆ. ಮಾನ್ಯ ರೈತ ಬಾಂಧವರೇ,
ಕಳೆದ ಎರಡು-ಮೂರು ವರ್ಷಗಳಿಂದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ ರಾಜ್ಯ ಸರ್ಕಾರದ ಬೇಜವಾಬ್ದಾರಿತನದಿಂದಾಗಿ ತೀವ್ರ ಅವ್ಯವಸ್ಥೆ ಉಂಟಾಗಿದ್ದು, ಜಿಲ್ಲೆಯ ರೈತರು ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ.
ಜಿಲ್ಲೆಯಾದ್ಯಂತ ಸ್ಥಾಪಿಸಲಾಗಿರುವ ಮಳೆ ಮಾಪನ ಕೇಂದ್ರಗಳು (Rain Gauge Stations) ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಕೆಟ್ಟು ನಿಂತಿರುವುದು ಸರ್ಕಾರದ ಆಡಳಿತಾತ್ಮಕ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಈ ಕೇಂದ್ರಗಳ ನಿರ್ವಹಣೆಯ ಸಂಪೂರ್ಣ ಹೊಣೆ ಹೊತ್ತಿರುವ ರಾಜ್ಯ ಸರ್ಕಾರವು ತನ್ನ ಕರ್ತವ್ಯದಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಮಳೆಯ ನಿಖರ ಮಾಹಿತಿ ಲಭ್ಯವಾಗದ ಕಾರಣ ಅರ್ಹ ರೈತರು ಹವಾಮಾನ ಆಧಾರಿತ ಬೆಳೆ ವಿಮೆಯ ಪರಿಹಾರದಿಂದ ವಂಚಿತರಾಗಿ ಆರ್ಥಿಕವಾಗಿ ಬಸವಳಿಯುವಂತಾಗಿದೆ.
ಸರ್ಕಾರದ ಈ ವ್ಯವಸ್ಥಿತ ಲೋಪದೋಷಗಳು ಮತ್ತು ನಿರ್ಲಕ್ಷ್ಯ ಧೋರಣೆಯಿಂದಾಗಿ ಕೃಷಿಕರಿಗೆ ಆಗುತ್ತಿರುವ ಅನ್ಯಾಯವನ್ನು
ರಾಜ್ಯ ಸರ್ಕಾರವು ಕೂಡಲೇ ಎಚ್ಚೆತ್ತುಕೊಂಡು ಎಲ್ಲಾ ಮಳೆ ಮಾಪನ ಕೇಂದ್ರಗಳನ್ನು ಸರಿಪಡಿಸಿ, ರೈತರಿಗೆ ನ್ಯಾಯಬದ್ಧವಾಗಿ ವಿಮೆ ಪರಿಹಾರ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಶಿರಸಿಯ ಸಹಾಯಕ ಆಯುಕ್ತರಿಗೆ (AC) ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ದಿನಾಂಕ 16-05-2026ರ ಶನಿವಾರ ಬೆಳಿಗ್ಗೆ 10:30 ಗಂಟೆಗೆ ಶಿರಸಿಯ ಸಹಾಯಕ ಆಯುಕ್ತರ ಕಚೇರಿ (AC Office) ಆವರಣದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನಾತ್ಮಕ ಮನವಿ ಸಲ್ಲಿಕೆಯ ಕಾರ್ಯಕ್ರಮದಲ್ಲಿ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸುತ್ತೇವೆ.
ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಸರ್ಕಾರದ ವಿರುದ್ಧ ದನಿ ಎತ್ತಲು ಮತ್ತು ರೈತರ ಹಿತರಕ್ಷಣೆಗಾಗಿ ನಾವೆಲ್ಲರೂ ಒಂದಾಗಿ ಕೈಜೋಡಿಸೋಣ.
*ಬನ್ನಿ, ರೈತರ ಹಿತಕ್ಕಾಗಿ ಹೋರಾಡೋಣ.*
