ಸುದ್ದಿ ಕನ್ನಡ ವಾರ್ತೆ
ಕಾರವಾರ:ಗೋವಾದ ಬೇತುಲ್ ಸಮುದ್ರ ಪ್ರದೇಶದಲ್ಲಿ ಮೀನುಗಾರಿಕೆಗೆ ತೆರಳಿದ್ದ ಪರ್ಷಿನ್ ಬೋಟ್ ಆಳ ಸಮುದ್ರದಲ್ಲಿ ಮುಳುಗಿದ ಘಟನೆ ನಡೆದಿದೆ. ಬೋಟ್‌ನಲ್ಲಿದ್ದ 22 ಮೀನುಗಾರರನ್ನು ಮತ್ತೊಂದು ಮೀನುಗಾರಿಕಾ ಬೋಟ್ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ರಕ್ಷಿಸಿ ದಡಕ್ಕೆ ಕರೆ ತಂದಿದ್ದಾರೆ.
ಕಾರವಾರದ ಮುದಗಾ ಬಂದರಿನ ದಿನೇಶ ಕಾಂಚನ್ ಮಾಲಕತ್ವದ “ಶ್ರೀ ಅಮ್ಮ” ಹೆಸರಿನ ಪರ್ಷಿನ್ ಬೋಟ್ ಮೀನುಗಾರಿಕೆಯಲ್ಲಿ ತೊಡಗಿದ್ದ ವೇಳೆ ಏಕಾಏಕಿ ಮುಳುಗಡೆಯಾಗಿದೆ. ಸಮುದ್ರದಲ್ಲಿ ಘಟನೆ ತಿಳಿಯುತ್ತಿದ್ದಂತೆಯೇ ಮುದಗಾ ಬಂದರಿನ ನರೇಶ್ ತಾಂಡೇಲ ಮಾಲಕತ್ವದ “ಜಲರಾಜ” ಬೋಟ್ ರಕ್ಷಣೆಗೆ ಧಾವಿಸಿದೆ.
ಮುಳುಗಿದ ಬೋಟ್‌ನಲ್ಲಿದ್ದ ಎಲ್ಲ 22 ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿ ದಡಕ್ಕೆ ಕರೆತರಲಾಗಿದೆ. ಘಟನೆಯ ಬಳಿಕ ಸೋಮವಾರವೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸ್ಥಳೀಯ ಆರು ಮೀನುಗಾರಿಕಾ ಬೋಟ್‌ಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ.
ಎರಡು ಬಲೆಗಳ ಸಮೇತ ಪರ್ಷಿನ್ ಬೋಟ್ ಸಮುದ್ರದಲ್ಲೇ ಸಿಲುಕಿಕೊಂಡಿದ್ದು, ಘಟನೆಯಿಂದ ಕೋಟ್ಯಂತರ ರೂ. ನಷ್ಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.ಮುಳುಗಡೆಯಾದ ಬೋಟ್ ಹಾಗೂ ಬಲೆಗಳನ್ನು ಸುರಕ್ಷಿತವಾಗಿ ದಡಕ್ಕೆ ತರಲು ಮುದಗಾ ಬಂದರಿನಿಂದ 10ಕ್ಕೂ ಹೆಚ್ಚು ಮೀನುಗಾರಿಕಾ ಬೋಟ್‌ಗಳೊಂದಿಗೆ ಸಮುದ್ರದತ್ತ ತೆರಳಿ ಮೀನುಗಾರರು ಕಾರ್ಯಾಚರಣೆ ನಡೆಸಿ ಬೋಟ್ ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
