ಸುದ್ದಿ ಕನ್ನಡ ವಾರ್ತೆ
ಸಾಗರ: ಯುರೋಪಿನ ಸರ್ಬಿಯಾ ದೇಶದ ನೊವಿಸಡ್ ನಗರದ ಪ್ರತಿಷ್ಠಿತ ‘ಸ್ಟರಿಜಿನೊ ಪೊಜೊರ್ಜೆ’ ಛಾಯಾಗ್ರಹಣ ಸಂಸ್ಥೆಯು ಆಯೋಜಿಸಿದ್ದ ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಸಾಗರದ ಖ್ಯಾತ ಹವ್ಯಾಸಿ ಛಾಯಾಗ್ರಾಹಕ ಜಿ.ಆರ್. ಪಂಡಿತ್ ಅವರು ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಂಸ್ಥೆಯು ಆಯೋಜಿಸಿದ್ದ 18ನೇ ‘ಟೈಯೇನಿ ಯಲ್ ಫೋಟೋಗ್ರಾಫಿಕ್ ಆರ್ಟ್ ಇನ್ ಥಿಯೇಟರ್’ ಸ್ಪರ್ಧೆಯ ಫಲಿತಾಂಶವು ಇಂದು ಪ್ರಕಟಗೊಂಡಿದ್ದು, ಒಟ್ಟು 13 ಮಂದಿ ವಿಜೇತರ ಪೈಕಿ ಭಾರತದ ಮೂವರು ಛಾಯಾಗ್ರಾಹಕರು ಸ್ಥಾನ ಪಡೆದಿದ್ದಾರೆ. ಈ ಪೈಕಿ ಕರ್ನಾಟಕದಿಂದ ಪ್ರಶಸ್ತಿ ಪಡೆದ ಏಕೈಕ ಛಾಯಾಗ್ರಾಹಕ ಎಂಬ ಹೆಗ್ಗಳಿಕೆಗೆ ಜಿ.ಆರ್. ಪಂಡಿತ್ ಪಾತ್ರರಾಗಿದ್ದು, ಅವರಿಗೆ ‘ಫೆಡರೇಶನ್ ಆಫ್ ಇಂಟರ್ನ್ಯಾಷನಲ್ ಆರ್ಟ್ ಫೋಟೋಗ್ರಾಫಿಕ್ ಅವಾರ್ಡ್’ ಲಭಿಸಿದೆ.
ಕಳೆದ ಡಿಸೆಂಬರ್ನಲ್ಲಿ ಸಾಗರ ಫೋಟೋ ಗ್ರಾಫಿಕ್ ಸೊಸೈಟಿಯು ನೀನಾಸಂ ಹೆಗ್ಗೋಡಿನಲ್ಲಿ ಆಯೋಜಿಸಿದ್ದ ಛಾಯಾ ಗ್ರಹಣ ಕಾರ್ಯಾಗಾರದ ಸಂದರ್ಭದಲ್ಲಿ ಜಿ.ಆರ್. ಪಂಡಿತ್ ಅವರು ಈ ಚಿತ್ರವನ್ನು ಸೆರೆಹಿಡಿದಿದ್ದರು. ‘ಕಂಸವಧೆ’ ಯಕ್ಷಗಾನ ಪ್ರಸಂಗದ ಪೂರ್ವತಯಾರಿಯ ವೇಳೆ ಮೇಕಪ್ ರೂಂನಲ್ಲಿ ಕಲಾವಿದರ ಭಾವವನ್ನೊಳಗೊಂಡ ಅದ್ಭುತ ಕ್ಷಣವನ್ನು ಅವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು. ಈ ಚಿತ್ರವು ಜಾಗತಿಕ ಮಟ್ಟದ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ.
ಮೂಲತಃ ಮಾಳಕೋಡಿನವರಾದ ಜಿ.ಆರ್.ಪಂಡಿತ್ ಅವರು ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಪ್ರಸ್ತುತ ಸಾಗರದಲ್ಲಿ ನೆಲೆಸಿದ್ದಾರೆ.
ಅಲ್ಲದೆ, ಸಾಗರ ಫೋಟೋಗ್ರಾಫಿಕ್ ಸೊಸೈಟಿಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಕ್ಷಗಾನದಂತಹ ದೇಸೀ ಕಲೆಯ ಹಿನ್ನೆಲೆಯಲ್ಲಿ ಸೆರೆಹಿಡಿಯಲಾದ ಚಿತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದ ಗೌರವ ಲಭಿಸಿರುವುದು ನಾಡಿನ ಕಲೆ ಮತ್ತು ಸಾಂಸ್ಕೃತಿಕ ಲೋಕಕ್ಕೆ ಸಂದ ಗೌರವವಾಗಿದೆ.
