ಸುದ್ದಿ ಕನ್ನಡ ವಾರ್ತೆ

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ವತಿಯಿಂದ ಎಪ್ರಿಲ್ 20 ಮತ್ತು 21ರಂದು ಶಿರಸಿ ನಗರ ಹಾಗೂ ಸ್ವರ್ಣವಲ್ಲೀ ಮಠದಲ್ಲಿ ‘ಶ್ರೀ ಶಂಕರ ಜಯಂತಿ’ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು, ಧರ್ಮಸಭೆ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭಗಳು ಜರುಗಲಿವೆ.

ಸೋಮವಾರ ಬೆಳಿಗ್ಗೆ 9:30ಕ್ಕೆ ನಗರದ ಯೋಗ ಮಂದಿರಲ್ಲಿ ಶ್ರೀ ಶಂಕರ ಸ್ತೋತ್ರ ಪಾರಾಯಣದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ.ಸಂಜೆ 4 ಗಂಟೆಗೆ ನಡೆಯುವ ಧರ್ಮಸಭೆಯಲ್ಲಿ ಸ್ವರ್ಣವಲ್ಲೀ ಪೀಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಹಾಗೂ ಶ್ರೀ ಆನಂದಬೋಧೇಂದ್ರ ಸರಸ್ವತಿ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಶಿರಳಗಿಯ ಶ್ರೀ ಬ್ರಹ್ಮಾನಂದಭಾರತೀ ಮಹಾಸ್ವಾಮಿಗಳು ಉಪಸ್ಥಿತರಿರಲಿದ್ದಾರೆ.

ಮಂಗಳವಾರ ಬೆಳಿಗ್ಗೆಯಿಂದ ಸ್ವರ್ಣವಲ್ಲಿ ಮಠದಲ್ಲಿ ಶ್ರೀ ಗಣಪತಿ ಪೂಜೆ, ವೇದ ಪಾರಾಯಣ, ಭಾಷ್ಯತ್ರಯ ಪಾರಾಯಣ ಹಾಗೂ ಶ್ರೀ ಶಂಕರಾಚಾರ್ಯ ಕಟ್ಟೋಕ್ತ ಮಹಾಪೂಜೆ ನಡೆಯಲಿದೆ. ಸಂಜೆ 4:30ಕ್ಕೆ ನಡೆಯುವ ಸಭೆಯಲ್ಲಿ ಶಿವಮೊಗ್ಗ ರಾಮಕೃಷ್ಣಾಶ್ರಮದ ಶ್ರೀ ವಿನಯಾನಂದ ಸರಸ್ವತೀ ಸ್ವಾಮಿಗಳು ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ.

ಸಂಸ್ಕೃತ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಈ ಸಂದರ್ಭದಲ್ಲಿ ಗೌರವ ಸಲ್ಲಿಸಲಾಗುತ್ತಿದೆ. ಎ. 20ರಂದು ಡಾ. ಶಂಕರ ಭಟ್ ಉಂಚಳ್ಳಿ ಅವರಿಗೆ ಹಾಗೂ ಎ. 21ರಂದು ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ವಿಶ್ರಾಂತ ಉಪಕುಲಪತಿ ಡಾ.ಪರಮೇಶ್ವರ ಶಾಸ್ತ್ರಿ ಅವರಿಗೆ ಸಾಧನಾ ಶಂಕರ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಧಾರ್ಮಿಕ ಶ್ರದ್ಧೆಯ ಕುಟುಂಬಗಳಾದ ಕೇಶವ ಹೆಗಡೆ ಗಡಿಕೈ ದಂಪತಿ ಹಾಗೂ ವೆಂಕಟರಮಣ ನರಸಿಂಹ ಗೇರಗದ್ದೆ ದಂಪತಿಗೆ ಸಮ್ಮಾನ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಜ್ಞಾನ ದಾಸೋಹದಲ್ಲಿ ಪಾಲ್ಗೊಳ್ಳುವಂತೆ ಶ್ರೀಮಠದ ಪ್ರಕಟಣೆ ತಿಳಿಸಿದೆ.