ಸುದ್ದಿ ಕನ್ನಡ ವಾರ್ತೆ

ಅಂಕೋಲಾ:ತಾಲೂಕಿನ ಅಗಸೂರು ಪಂಚಾಯತ ವ್ಯಾಪ್ತಿಯ ಕಂಚಿನಬಾಗಿಲು ಬಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಗುರುವಾರ ಪೆಟ್ರೋಲ್ ಸಾಗಿಸುತ್ತಿದ್ದ ಎನ್ನಲಾದ ಟ್ಯಾಂಕ‌ರ್ ಬೆಂಕಿಗಾಹುತಿಯಾದ ಘಟನೆ ನಡೆದಿದೆ.

ಮಾಹಿತಿಯ ಪ್ರಕಾರ ಕೆ.ಎ-48 ಎ 2330 ಸಂಖ್ಯೆಯ ಟ್ಯಾಂಕ‌ರ್ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲೇ ಉರುಳಿದಿದ್ದು, ಪಲ್ಟಿಯಾದ ಕೆಲವೇ ಕ್ಷಣಗಳಲ್ಲಿ ಧಗಧಗ ಹೊತ್ತಿ ಉರಿದಿದೆ. ಟ್ಯಾಂಕರ್‌ನಲ್ಲಿ ಜ್ವಲನಶೀಲ ವಸ್ತು ಇದ್ದ ಶಂಕೆಯಿಂದ ಸ್ಥಳೀಯರು ಹತ್ತಿರ ಹೋಗಲು ಹೆದರಿದ ಘಟನೆ ನಡೆದಿದೆ.

ಘಟನೆ ಸಮಯದಲ್ಲಿ ಟ್ಯಾಂಕ‌ರ್ ಮೇಲಿನಿಂದ ಚಾಲಕ ಹಾರಿರುವ ಸಾಧ್ಯತೆ ಇದೆ ಎಂದು ಪ್ರತ್ಯಕ್ಷದರ್ಶಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಚಾಲಕ ಪತ್ತೆಯಾಗದ ಹಿನ್ನಲೆಯಲ್ಲಿ ಬೆಂಕಿಗಾಹುತಿ ಆಗಿರುವ ಆತಂಕವೂ ವ್ಯಕ್ತವಾಗುತ್ತಿದೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ.ಇದೇ ವೇಳೆ, ಪ್ರದೇಶದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇರುವುದರಿಂದ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲು ತೊಂದರೆ ಉಂಟಾಯಿತು ಎನ್ನಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಕಾರ್ಯಾಚರಣೆ ಕೈಗೊಂಡಿದ್ದಾರೆ. ಅಪಘಾತದ ನಿಖರ ಕಾರಣ ಹಾಗೂ ಚಾಲಕರ ಸ್ಥಿತಿ ಕುರಿತು ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.