ಸುದ್ದಿ ಕನ್ನಡ ವಾರ್ತೆ

​ಉತ್ತರ ಕನ್ನಡದಲ್ಲಿ ಮಾರಕ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹೊರಟಿರುವುದು ಕಾಂಗ್ರೆಸ್ ಸರ್ಕಾರದ ಮರಣಶಾಸನ:
​ಉತ್ತರ ಕನ್ನಡ ಜಿಲ್ಲೆಯ ಪರಿಸರ ಮತ್ತು ಜನರ ಬದುಕಿಗೆ ಮಾರಕವಾಗಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಮತ್ತು ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗಳ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರವು ಜಿಲ್ಲೆಯ ಜನರ ಕಣ್ಣಿಗೆ ಮಣ್ಣೆರಚುವ ಕೀಳುಮಟ್ಟದ ರಾಜಕಾರಣಕ್ಕೆ ಇಳಿದಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಉತ್ತರಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ಸದಾನಂದ ಭಟ್ ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆ ಹೊರಡಿಸಿರುವವರು ಇಷ್ಟು  ದಿನ ಈ ಯೋಜನೆಗಳನ್ನು ಬಿಜೆಪಿ ರೂಪಿಸಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದ ಜಿಲ್ಲೆಯ ಉಸ್ತುವಾರಿ ಸಚಿವರು, ಕಾಂಗ್ರೆಸ್ ಶಾಸಕರು ಮತ್ತು ಪದಾಧಿಕಾರಿಗಳು ಈಗ ತಮ್ಮ ಮುಖ್ಯಮಂತ್ರಿಗಳ ಲಿಖಿತ ಬೇಡಿಕೆಯಿಂದ ತಮ್ಮ ಅಸಲಿ ಬಣ್ಣ ಬಯಲು ಮಾಡಿಕೊಂಡಿದ್ದಾರೆ. ಜಿಲ್ಲೆಯ ಜನರ ಮುಂದೆ ಈ ಯೋಜನೆಗಳಿಗೆ ನಮ್ಮ ವಿರೋಧವಿದೆ ಎಂದು ಸುಳ್ಳು ಹೇಳಿಕೆ ನೀಡಿ ಜನರ ಹಾದಿ ತಪ್ಪಿಸುತ್ತಿರುವ ಇವರು, ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ಮೋದಿ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಈ ಎರಡೂ ಯೋಜನೆಗಳನ್ನು ವಿಶೇಷ ಆದ್ಯತೆಯ ಮೇಲೆ ಜಾರಿಗೊಳಿಸಬೇಕೆಂದು ಆಗ್ರಹಿಸಿರುವುದಕ್ಕೆ ಏನು ಹೇಳುತ್ತಾರೆ? “ಮಗುವನ್ನು ಚಿವುಟುವವರೂ ಇವರೇ, ತೊಟ್ಟಿಲು ತೂಗುವವರೂ ಇವರೇ” ಎನ್ನುವಂತೆ, ಜನರ ಮುಂದೆ ಬಿಜೆಪಿ ನಾಯಕರ ಮೇಲೆ ಆರೋಪ ಮಾಡಿ, ವಿರೋಧದ ನಾಟಕವಾಡಿ, ದೆಹಲಿ ಮಟ್ಟದಲ್ಲಿ ಯೋಜನೆ ಜಾರಿಗೆ ಪಟ್ಟು ಹಿಡಿಯುತ್ತಿರುವ ಕಾಂಗ್ರೆಸ್‌ನ ಈ ಇಬ್ಬಂದಿ ನೀತಿ ಜಿಲ್ಲೆಯ ಜನರಿಗೆ ಮಾಡಿದ ದ್ರೋಹವಾಗಿದೆ.
​ಈ ಹಿಂದೆ ಕಾರವಾರದಲ್ಲಿ ಬಹಿರಂಗವಾಗಿಯೇ ಈ ಯೋಜನೆಗಳನ್ನು ಜಾರಿಗೊಳಿಸಿಯೇ ಸಿದ್ಧ ಎಂದು ಗುಡುಗಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಜಿಲ್ಲೆಯ ಜನರ ನೆನಪಿನಲ್ಲಿದೆ. ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ಈಗಾಗಲೇ ಜನರ ತೀವ್ರ ವಿರೋಧದ ಬಗ್ಗೆ ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಿದ್ದರೂ ಸಹ, ಯಾವ ಪುರುಷಾರ್ಥಕ್ಕಾಗಿ ರಾಜ್ಯ ಸರ್ಕಾರ ಈ ಯೋಜನೆಗಳಿಗೆ ಅನುಮತಿ ಕೊಡಿ ಎಂದು ಕೇಂದ್ರವನ್ನು ಒತ್ತಾಯಿಸುತ್ತಿದೆ ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಲಿ. ಜಿಲ್ಲೆಯ ಜನರ ಭಾವನೆಗಳಿಗೆ ಸ್ಪಂದಿಸುವುದನ್ನು ಬಿಟ್ಟು, ನೈಸರ್ಗಿಕ ಸಂಪತ್ತನ್ನು ನಾಶ ಮಾಡುವ ಇಂತಹ ಮಾರಕ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಹಠಕ್ಕೆ ಬಿದ್ದಿರುವುದು ಸರಿಯಲ್ಲ. ಮಗುವನ್ನು ಚಿವುಟಿ ತೊಟ್ಟಿಲು ತೂಗುವ ಇಬ್ಬಂದಿ ರಾಜಕಾರಣಕ್ಕೆ ಮುಂದೆ ತಕ್ಕ ಶಾಸ್ತಿ ಕಾದಿದೆ!
ಇನ್ನು ಬಿಜೆಪಿಯು ಜಾತಿಯ ಆಧಾರದಲ್ಲಿ ಜನರನ್ನು ಶೋಷಿಸುತ್ತಿದೆ ಎಂಬ ಕಾಂಗ್ರೆಸ್ ಜಿಲ್ಲಾ ನಾಯಕರ ಹೇಳಿಕೆಗಳು ಬಾಲಿಷತನದ ಪರಮಾವಧಿ. ಸಮಾಜದಲ್ಲಿ ಕೆಳವರ್ಗದವರನ್ನು ಹೋರಾಟಕ್ಕೆ ನೂಕಿ ಶೋಷಿಸುತ್ತಿದ್ದಾರೆ ಎಂದು ಬೇಜವಾಬ್ದಾರಿಯಿಂದ ಅರ್ಥರಹಿತವಾಗಿ ಮಾತನಾಡುತ್ತಿರುವುದು ಕಾಂಗ್ರೆಸ್ಸಿನ ಹತಾಶೆಯನ್ನು ತೋರಿಸುತ್ತದೆ. ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ದಾಖಲಿಸಿದ್ದ ಸುಳ್ಳು ಮೊಕದ್ದಮೆಗಳನ್ನು ಬಿಜೆಪಿ ಸರ್ಕಾರವು ತನ್ನ ಅವಧಿಯಲ್ಲಿ ಹಿಂತೆಗೆದುಕೊಂಡು ನ್ಯಾಯ ಒದಗಿಸಿತ್ತು. ಸಂಕಷ್ಟದಲ್ಲಿರುವ ತನ್ನ ಕಾರ್ಯಕರ್ತರ ಜೊತೆಗೆ ಬಿಜೆಪಿ ಸದಾ ಇರುತ್ತದೆ ಎಂಬುದು ಕಾಂಗ್ರೆಸ್‌ಗೆ ನೆನಪಿರಲಿ.
ಕಾಂಗ್ರೆಸ್ ​ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಪ್ರಿಯಾಂಕ್ ಖರ್ಗೆಯವರು ಆರ್.ಎಸ್.ಎಸ್ ಹಾಗೂ ಬಿಜೆಪಿಯ ವಿರುದ್ಧ ಉಗುಳುತ್ತಿರುವ ದ್ವೇಷಪೂರಿತ ಮಾತುಗಳನ್ನು ಸಮರ್ಥಿಸಿಕೊಳ್ಳುವ ಬರದಲ್ಲಿ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಬಿಜೆಪಿ ಮೇಲೆ ಮನಬಂದಂತೆ ಆಪಾದನೆ ಮಾಡುವುದನ್ನು ನಿಲ್ಲಿಸಲಿ. ಜನರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಜಿಲ್ಲೆಯ ಹಿತಾಸಕ್ತಿ ಕಾಪಾಡುವಂತೆ ಒತ್ತಾಯಿಸುವ ಧೈರ್ಯವನ್ನು ಜಿಲ್ಲಾ ಕಾಂಗ್ರೆಸ್ ನಾಯಕರು ತೋರಿಸಲಿ. ಅಭಿವೃದ್ಧಿಯ ಹೆಸರಿನಲ್ಲಿ ಜಿಲ್ಲೆಯ ಸರ್ವನಾಶಕ್ಕೆ ಮುಂದಾಗಿರುವ ಸರ್ಕಾರದ ಈ ದ್ವಂದ್ವ ನಿಲುವನ್ನು ಜನತೆ ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ “ಮಗುವನ್ನು ಚಿವುಟಿ ತೊಟ್ಟಿಲು ತೂಗುವ” ನಾಟಕಕ್ಕೆ ಜಿಲ್ಲೆಯ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಸದಾನಂದ ಭಟ್ ಹೇಳಿದ್ದಾರೆ.