ಸುದ್ದಿ ಕನ್ನಡ ವಾರ್ತೆ
ಮುಂಡಗೋಡ: ಪಟ್ಟಣದ ಬಿಎಸ್‌ಎನ್‌ಎಲ್ ಕಚೇರಿಯ ದೂರವಾಣಿ ವಿನಿಮಯ ಕೇಂದ್ರದಲ್ಲಿ ಸುಮಾರು 70 ಸಾವಿರ ರೂಪಾಯಿ ಮೌಲ್ಯದ ತಾಮ್ರದ ಕೇಬಲ್ ಕಳವಾಗಿರುವ ಘಟನೆ ನಡೆದಿದೆ.
ಮುಂಡಗೋಡ ಪಟ್ಟಣದ ಸಂತೆ ಮಾರ್ಕೆಟ್ ರಸ್ತೆಯಲ್ಲಿರುವ ಬಿಎಸ್‌ಎನ್‌ಎಲ್ ಕಚೇರಿಯ ಆವರಣದಲ್ಲಿ ಮಾರ್ಚ್ 18ರ ರಾತ್ರಿ 8 ಗಂಟೆಯಿಂದ ಮಾರ್ಚ್ 19ರ ಮುಂಜಾನೆ 6 ಗಂಟೆಯ ಅವಧಿಯಲ್ಲಿ ಈ ಕೃತ್ಯ ನಡೆದಿದೆ. ಕಚೇರಿಯ ಪವರ್ ಪ್ಲಾಂಟ್ ಬ್ಯಾಟರಿಗೆ ಅಳವಡಿಸಿದ್ದ ಸುಮಾರು 70 ಮೀಟರ್ ಉದ್ದದ (300 ಚದರ ಮಿ.ಮೀ) ತಾಮ್ರದ ಕೇಬಲ್ ಅನ್ನು ಕಳ್ಳರು ಕತ್ತರಿಸಿ ಕೊಂಡೊಯ್ದಿದ್ದಾರೆ.
ಕಳುವಾದ ಕೇಬಲ್‌ನ ಅಂದಾಜು ಮೌಲ್ಯ 70,000/-ರೂಪಾಯಿ ಎಂದು ತಿಳಿದುಬಂದಿದೆ. ಕಳವು ಪ್ರಕರಣದ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು, ಅವರಿಂದ ಅನುಮತಿ ಪಡೆದ ನಂತರ ದೂರು ನೀಡಲು ತಡವಾಗಿದೆ ಎಂದು ಬಿಎಸ್‌ಎನ್‌ಎಲ್ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ.
ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಪತ್ತೆಗಾಗಿ ತನಿಖೆ ಮುಂದುವರಿದಿದೆ.
