ಸುದ್ದಿ ಕನ್ನಡ ವಾರ್ತೆ
ಬನವಾಸಿ: ದಕ್ಷಿಣ ಕಾಶಿ, ಕದಂಬರ ಕುಲದೈವ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀಕ್ಷೇತ್ರ ಬನವಾಸಿಯ ಶ್ರೀ ಉಮಾ ಮಧುಕೇಶ್ವರ ದೇವರ ಮಹಾರಥೋತ್ಸವ (ದೊಡ್ಡ ತೇರು) ಮಾರ್ಚ್ 30ರಂದು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ದಕ್ಷಿಣ ಭಾರತದಲ್ಲಿ ಪ್ರಸಿದ್ಧಿ ಹೊಂದಿರುವ ಅತಿ ದೊಡ್ಡ ಹಾಗೂ ಅತಿ ಭಾರ ಹೊಂದಿರುವ ಇಲ್ಲಿಯ ಮಹಾರಥೋತ್ಸವವನ್ನು ನೋಡಲು ರಾಜ್ಯ ಹಾಗೂ ಹೊರ ರಾಜ್ಯದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಲಿದ್ದಾರೆ.
​ಈ ಬಾರಿಯ ರಥೋತ್ಸವದ ತಾಂತ್ರಿಕತೆಯನ್ನು ವೇ.ಮೂ. ಶ್ರೀನಿಧಿ ಮಂಗಳೂರು ನಿರ್ವಹಿಸಲಿದ್ದು, ಮಾ. 23ರಂದು ಶ್ರೀ ಮಹಾಗಣಪತಿ ಪೂಜೆ, ಮೃತಿಕಾಹರಣ, ಅಂಕು ರಾರೋಪಣದೊಂದಿಗೆ ಆರಂಭಗೊಂಡಿರುವ ಜಾತ್ರಾ ಮಹೋತ್ಸವ ಕಳೆದ ಒಂದು ವಾರದಿಂದ ಸಂಭ್ರಮದಿಂದ ನಡೆಯುತ್ತಿದೆ.

​ಮಂಗಳವಾರ 24ರಂದು ಧ್ವಾರೋಹಣ, ಭೇರಿತಾಡನ, ಮಹಾಬಲಿ ನಡೆದಿದ್ದು ಯಾಗಶಾಲಾ ಪ್ರವೇಶ, ಕೌತುಕ ಬಂಧನ ಮತ್ತು ಶಬಿಕಾ ಯಂತ್ರೋತ್ಸವ ನಡೆದಿದ್ದು, ಪ್ರತಿನಿತ್ಯವೂ ಭಕ್ತರು ಹಗಲೋತ್ಸವದ ತೇರು, ತಿರುಗಣಿ ತೇರುಗಳನ್ನು ಎಳೆದು ಸಂಭ್ರಮಿಸಿದ್ದಾರೆ. ನಿತ್ಯವೂ ಜಪ, ಹೋಮ-ಹವನಗಳು ನಡೆಯುತ್ತಿವೆ. ವೃಷಭ ಯಂತ್ರೋತ್ಸವ, ಪುಷ್ಪಮಂಜರಿ ಯಂತ್ರೋತ್ಸವ, ಸಿಂಹ ಯಂತ್ರೋತ್ಸವವೂ ಜರುಗಿದೆ.
​ಭಾನುವಾರ ರಾತ್ರಿ ಜನಸಾಗರದ ನಡುವೆ ಅದ್ದೂರಿಯಾಗಿ ಹೂವಿನ ತೇರು ಎಳೆದು ಭಕ್ತಿ ಮೆರೆದಿದ್ದಾರೆ. ಮಾರ್ಚ್ 30ರಂದು ಬೆಳಿಗ್ಗೆ ದೇವರ ಪಲ್ಲಕ್ಕಿ ಉತ್ಸವದ ಬಳಿಕ ಶ್ರೀ ಉಮಾಮಧುಕೇಶ್ವರ ದೇವರು ರಥಾರೂಢರಾಗಲಿದ್ದಾರೆ. ಬೆಳಿಗ್ಗೆ 11 ಗಂಟೆಯ ಬಳಿಕ ಶ್ರೀ ದೇವರ ದರ್ಶನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ಸಂಪ್ರದಾಯದಂತೆ ರಥವನ್ನೇರಿ ದರ್ಶನ ಪಡೆಯಲಿದ್ದಾರೆ. ರಾತ್ರಿ 12 ಗಂಟೆಗೆ ಮಹಾ ಮಂಗಳಾರತಿಯ ಬಳಿಕ ಮಹಾ ರಥೋತ್ಸವಕ್ಕೆ ಚಾಲನೆ ದೊರೆಯಲಿದೆ. ಮಧ್ಯರಾತ್ರಿ ಆರಂಭಗೊಳ್ಳುವ ಮಹಾ ರಥೋತ್ಸವ ಮರುದಿನ ಬೆಳಗಿನ ಜಾವ ಮುಕ್ತಾಯವಾಗಲಿದೆ. ಸಾವಿರಾರು ಭಕ್ತರು ಈ ಮಹಾ ರಥೋತ್ಸವಕ್ಕೆ ಸಾಕ್ಷಿ ಯಾಗಲಿದ್ದಾರೆ. ಎಪ್ರೀಲ್ 1ರಂದು ಅವಭೃತ ತೀರ್ಥಸ್ನಾನದೊಂದಿಗೆ ಜಾತ್ರೆಯ ವಿಧಿವಿಧಾನಗಳು ಸಂಪನ್ನಗೊಳ್ಳಲಿವೆ.