ಸುದ್ದಿ ಕನ್ನಡ ವಾರ್ತೆ
ಕಾರವಾರ: ತಾಲೂಕಿನ ಗೋವಾ ಗಡಿಭಾಗದಲ್ಲಿ ಅಡುಗೆ ಅನಿಲ ಸಿಲಿಂಡರ್ಗಳ ಅಕ್ರಮ ಸಾಗಾಟ ನಡೆಯುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ.
ತಾಲೂಕಿನ ಮಾಜಾಳಿ ಸಮೀಪದ ಚೆಕ್ಪೋಸ್ಟ್ನಲ್ಲಿ ಪ್ರತಿಯೊಂದು ವಾಹನಗಳನ್ನುಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಇದುವರೆಗೆ ಕೇವಲ ಅಕ್ರಮ ಮದ್ಯ ಸಾಗಾಟಕ್ಕೆ ಬ್ರೇಕ್ ಹಾಕುತ್ತಿದ್ದ ಪೊಲೀಸರು, ಇದೀಗ ಸಿಲಿಂಡರ್ ಕಳ್ಳಸಾಗಣೆದಾರರಿಗೂ ಬಿಸಿ ಮುಟ್ಟಿಸಲು ಸಜ್ಜಾಗಿದ್ದಾರೆ.
ನೆರೆಯ ಗೋವಾ ರಾಜ್ಯದಲ್ಲಿ ಪ್ರಸ್ತುತ ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಕೊರತೆ ಎದುರಾಗಿದೆ. ಇದರ ಲಾಭ ಪಡೆಯಲು ಮುಂದಾಗಿರುವ ಕೆಲವು ಕಿಡಿಗೇಡಿಗಳು ಕಾರವಾರದಿಂದ ಅಕ್ರಮವಾಗಿ ಸಿಲಿಂಡರ್ಗಳನ್ನು ಗೋವಾಕ್ಕೆ ಸಾಗಿಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಕಾರವಾರ ಮತ್ತು ಗೋವಾ ಗಡಿ ಕೇವಲ ಹತ್ತು ಕಿಲೋಮೀಟರ್ ಅಂತರದಲ್ಲಿರುವುದರಿಂದ ಸಂಬಂಧಿಕರ ಮನೆಗೆ ನೀಡಲು ಕೊಂಡೊಯ್ಯುತ್ತಿದ್ದೇವೆ ಎಂಬ ನೆಪವೊಡ್ಡಿ ಸಿಲಿಂಡರ್ ಸಾಗಿಸುವ ಜಾಲ ಸಕ್ರಿಯವಾಗಿರುವ ಶಂಕೆ ವ್ಯಕ್ತವಾಗಿದೆ. ಅಕ್ರಮ ಸಾಗಾಟದ ಬಗ್ಗೆ ದೂರುಗಳು ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಅವರು ಗಡಿಭಾಗದಲ್ಲಿ ಕಟ್ಟುನಿಟ್ಟಿನ ನಿಗಾವಹಿಸಲು ಸೂಚಿಸಿದ್ದಾರೆ.
ಅದರಂತೆ ಗಡಿಭಾಗದ ತಪಾಸಣೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಪರವಾನಗಿ ಇಲ್ಲದೆ ಅಥವಾ ಅಕ್ರಮವಾಗಿ ಸಿಲಿಂಡರ್ ಸಾಗಾಟ ಮಾಡುವುದು ಕಂಡುಬಂದಲ್ಲಿ ತಕ್ಷಣವೇ ವಾಹನ ಜಪ್ತಿ ಮಾಡಿ, ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.
ಗಡಿಭಾಗದ ಮೂಲಕ ಗೋವಾಕ್ಕೆ ತೆರಳುವ ಪ್ರತಿಯೊಂದು ಸರಕು ಸಾಗಣೆ ವಾಹನ ಹಾಗೂ ಖಾಸಗಿ ವಾಹನಗಳ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ.
