ಸುದ್ದಿ ಕನ್ನಡ ವಾರ್ತೆ ​
ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಾರರಿಗೆ ಯುಗಾದಿ ಹಬ್ಬದ ಈ ಶುಭ ಸಂದರ್ಭದಲ್ಲಿ ಸಿಹಿ ಸುದ್ದಿಯೊಂದು ಲಭಿಸಿದೆ.

ಜಿಲ್ಲೆಯ ರೈತರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ‘ಹವಾಮಾನ ಆಧಾರಿತ ಬೆಳೆ ವಿಮೆ’ಯ ಎರಡನೇ ಕಂತಿನ ಮೊತ್ತವು ಇಂದಿನಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲು ಪ್ರಾರಂಭವಾಗಿದೆ.
​ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದ ಬಾಕಿ ವಿಮಾ ಮೊತ್ತವು ಈಗ ಅರ್ಹ ಫಲಾನುಭವಿ ರೈತರಿಗೆ ಹಂತ ಹಂತವಾಗಿ ಬಿಡುಗಡೆಯಾಗುತ್ತಿದೆ. ಈ ಪ್ರಕ್ರಿಯೆಯು ಇಂದಿನಿಂದ ಸತತವಾಗಿ ಮುಂದುವರಿಯಲಿದ್ದು, ನೇರ ನಗದು ವರ್ಗಾವಣೆ (DBT) ಮೂಲಕ ರೈತರ ಖಾತೆಗಳನ್ನು ತಲುಪಲಿದೆ. ಇದು ಜಿಲ್ಲೆಯ ಕೃಷಿಕ ಕುಟುಂಬಗಳಲ್ಲಿ ಯುಗಾದಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.
​ಜಿಲ್ಲೆಯ ಅಡಿಕೆ ಬೆಳೆಗಾರರು ಈಗಾಗಲೇ ಎಲೆ ಚುಕ್ಕಿ ರೋಗದ ಬಾಧೆ ಮತ್ತು ಇಳುವರಿ ಕುಂಠಿತದಿಂದಾಗಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಇಂತಹ ಕಠಿಣ ಸಮಯದಲ್ಲಿ ಬಾಕಿ ಇದ್ದ ವಿಮೆ ವಿತರಣೆ ಆರಂಭವಾಗಿರುವುದು ಜಿಲ್ಲೆಯ ಕೃಷಿಕರಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

​”ರೈತರ ಸಂಕಷ್ಟಕ್ಕೆ ಸ್ಪಂದಿಸಿ, ಬೆಳೆ ವಿಮೆಯನ್ನು ಶೀಘ್ರವಾಗಿ ವಿತರಿಸಲು ಶ್ರಮಿಸಿದ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ, ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಹಾಗೂ ಈ ಪ್ರಕ್ರಿಯೆಯಲ್ಲಿ ಸಹಕರಿಸಿದ ಕೇಂದ್ರ ಮತ್ತು ರಾಜ್ಯದ ಎಲ್ಲಾ ಅಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಉತ್ತರ ಕನ್ನಡ ಜಿಲ್ಲೆಯ ಪ್ರತಿಯೊಬ್ಬ ಅರ್ಹ ರೈತರಿಗೂ ಈ ವಿಮೆಯ ಸೌಲಭ್ಯ ಹಂತ ಹಂತವಾಗಿ ತಲುಪಲಿದ್ದು, ಸಂಕಷ್ಟದ ಸಮಯದಲ್ಲಿ ಇದು ರೈತರಿಗೆ ದೊಡ್ಡ ಆಸರೆಯಾಗಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.